ಮಂಡ್ಯ : ಬಾಲಕಿಯೊಬ್ಬಳಿಗೆ ಒಂದು ವರ್ಷದ ಹಿಂದೆ ಬಲವಂತದಿಂದ ವಿವಾಹ ಮಾಡಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ದಲಿತ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ನಿವಾಸಿ ಬಾಲಕಿಯ ಪತಿ ಪ್ರವೀಣ್‌ಕುಮಾರ್ ಎಂಬಾತ, ದಲಿತ ಮುಖಂಡ ಮರಳಿಗೆ ಶಿವರಾಜು ಎಂಬಾತ ಮತ್ತು ಇದೇ ಗ್ರಾಮದ ಆಟೋ ಚಾಲಕ ಚೆನ್ನೇಶ್ ಹಾಗೂ ನಂದನ್ ಎಂಬುವರ ವಿರುದ್ಧ ಪೊಲೀಸರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಐಪಿಸಿ 376ರ ಅನ್ವಯ ಪೋಕ್ಸೋ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಆರೋಪಿಗಳು 2020ರ ಅಕ್ಟೋಬರ್ 25ರಂದು ಬೆಳಗಿನ ಜಾವ 5ಗಂಟೆ ಸಮಯದಲ್ಲಿ ಮದ್ದೂರು ತಾಲೂಕು ಕೊಪ್ಪ ಹೋಬಳಿ ಹೆಗ್ಗಡೆದೊಡ್ಡಿ ಗ್ರಾಮದಲ್ಲಿರುವ ಶ್ರೀಬೀರೇಶ್ವರ ಚನ್ನಕೇಶವ ದೇಗುಲದಲ್ಲಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬಲವಂತದಿಂದ ಬಾಲ್ಯವಿವಾಹ ಮಾಡಿದ್ದರು. ನಂತರ ಆರೋಪಿಗಳಾದ ಮರಳಿಗೆ ಶಿವರಾಜು, ಚೆನ್ನೇಶ್ ಹಾಗೂ ನಂದನ್ ಅವರು ಕೊಡಿಯಾಲದಲ್ಲಿರುವ ಪತಿ ಪ್ರವೀಣ್ ಕುಮಾರ್ ಮನೆಗೆ ಬಿಟ್ಟು ಹೋಗಿದ್ದರು.
ಆ ನಂತರ ಮರಳಿಗ ಗ್ರಾಮದ ಬಾಲಕಿಯ ಪೋಷಕರು ತಮ್ಮ ಪುತ್ರಿಗೆ ಬಾಲ್ಯ ವಿವಾಹವಾಗಿ ಗ್ರಾಮದಿಂದ ನಾಪತ್ತೆಯಾಗಿದ್ದಾಳೆಂದು ಬೆಸಗರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಬಾಲ್ಯವಿವಾಹದ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಿ ಎಸ್ ರಾಜೇಶ್ವರಿ ಆ.11ರಂದು ಪೊಲೀಸರಿಗೆ ದೂರು ನೀಡಿ ಆಪ್ತ ಸಮಾಲೋಚನೆಗೆ ಒಳಪಡಿಸಲು ಬಾಲಕಿ ಮತ್ತು ಆಕೆಯ ಪೋಷಕರನ್ನು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರು ಪಡಿಸುವಂತೆ ಕೋರಿದರು.
ಬಳಿಕ ಪೊಲೀಸರು ಆ.18ರಂದು ಬಾಲಕಿಯನ್ನು ನಾಗಮಂಗಲ ಟೌನ್ ಪ್ರವಾಸಿಮಂದಿರದ ಬಳಿ ಮಗುವಿನೊಂದಿಗೆ ಇರುವುದನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು. ಬಳಿಕ ವಿಚಾರಣೆ ನಡೆಸಿದಾಗ ದಲಿತ ಮುಖಂಡ ಮರಳಿಗ ಶಿವರಾಜು, ಆಟೋಚಾಲಕ ಚೆನ್ನೇಶ್ ಹಾಗೂ ನಂದನ್ ಅವರು ಬಲವಂತವಾಗಿ ಪ್ರವೀಣ್‌ಕುಮಾರ್ ಅವರೊಂದಿಗೆ ಬಾಲ್ಯ ವಿವಾಹ ಮಾಡಿರುವ ಪ್ರಕರಣ ಬೆಳಕಿಗೆ ಬಂತು.
ನಾಗಮಂಗಲದ ಶಶಿಕಲಾ ನರ್ಸಿಂಗ್ ಹೋಮ್‌ನಲ್ಲಿ ಗಂಡು ಮಗುವಿಗೆ ಜನ್ಮನೀಡಿರುವುದಾಗಿ ಬಾಲಕಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಸಿಡಿಪಿಒ ಕಚೇರಿ ಮೇಲ್ವಿಚಾರಕಿ ರಾಜೇಶ್ವರಿ ದೂರಿನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.