ಮಂಡ್ಯ: ಪಾಪ ಪುಟ್ಟರಾಜು ಸೋಲನ್ನೇ ಕಂಡಿಲ್ಲ. ಅವರ ನಾಯಕರಾದ ಕುಮಾರಸ್ವಾಮಿಯೂ ಸೋತಿಲ್ಲ. ನಾನು ಮಾತ್ರ ಸೋಲು ಕಂಡಿದ್ದೇನೆ. ದೇವರು ಅವರಿಗೆ ಒಳ್ಳೆಯದ್ದನ್ನು ಮಾಡಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.
ಕೆ.ಆರ್.ಪೇಟೆಯಲ್ಲಿ ಮನ್‌ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋಲಿನ ಕುರಿತು ಮಾತನಾಡಿ, ನಾವು ಈಗ ಸೋತಿದ್ದೇವೆ. ಸೋಲನ್ನು ಒಪ್ಪಿಕೊಳ್ಳುತ್ತೇವೆ. ಪುಟ್ಟರಾಜು ರಾಜಕೀಯ ಜೀವನದಲ್ಲಿ ಒಮ್ಮೆಯೂ ಸೋತಿಲ್ಲ. ನಾನು ಸೋಲಿನ ಕಹಿಯನ್ನು ಕಂಡಿದ್ದೇನೆ ಅಷ್ಟೇ ಎಂದು ಹೀಯಾಳಿಸಿದರು.
37 ಸ್ಥಾನ ಪಡೆದ ಜೆಡಿಎಸ್ ನಾಯಕರು ಕಾಂಗ್ರೆಸ್ ಸಹಾಯದಿಂದ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದರು. ಆದರೆ, ಅವರದ್ದೇ ಪಕ್ಷದ ಮೂವರು ಸಿಎಂ ವಿರುದ್ಧ ನಿಂತು ಸರ್ಕಾರ ಬೀಳಿಸಿದ್ದನ್ನು ಪುಟ್ಟರಾಜು ಮರೆತಿದ್ದಾರೆಯೇ? ಎಂದರು.
ಯಡಿಯೂರಪ್ಪ ಒಳ್ಳೆಯ ಆಡಳಿತಗಾರರು. ಕೇಂದ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ನೆರೆ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರಾಜ್ಯವನ್ನು ಕಡೆಗಣಿಸಿದ್ದಾರೆ. ಕೇಂದ್ರ ತುರ್ತು ಪರಿಹಾರ ನೀಡಿ, ಮಿಕ್ಕ ಹಣವನ್ನು ಇನ್ನೊಂದು ಕಂತಿನಲ್ಲಿ ನೀಡಬಹುದಿತ್ತು. ಆದರೆ ಕೇಂದ್ರ ಸರ್ಕಾರ ಏಕೆ ಹೀಗೆ ಮಾಡುತ್ತಿದೆ? ಎಂಬುದು ಗೊತ್ತಿಲ್ಲ ಎಂದು ಹೇಳಿದ್ರು.