ಮಂಡ್ಯ: ರಾಜ್ಯ ರಾಜಕಾರಣದ ಬೆಳವಣಿಗೆ ಹಾಗೂ ಶಾಸಕರ ರಾಜೀನಾಮೆ ಪ್ರಕರಣದ ನಿರ್ಧಾರವನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಂವಿಧಾನತ್ಮಕವಾಗಿ ಪರಿಹರಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ತುಂಬಾ ಸಮಯದಿಂದ ಅತೃಪ್ತಿ ಇತ್ತು. ಇದೀಗ ಬ್ಲಾಸ್ಟ್ ಆಗಿದೆ. ಕಾಂಗ್ರೆಸ್ ಶಾಸಕರಿಗೆ ನಾವು ಶಾಸಕರಾಗಿರುವುದಕ್ಕಿಂತ ರಾಜೀನಾಮೆ ನೀಡಿ ಸಾಮಾನ್ಯ ಮನುಷ್ಯರಾಗಿರೋಣ ಎನಿಸಿದೆ. ಶಾಸಕರಿಗೆ ಇಂತಹ ಸರ್ಕಾರ, ನಾಯಕರ ಜೊತೆ ಕೆಲಸ ಮಾಡುವುದು ಇಷ್ಟ ಇರಲಿಲ್ಲ. ಸರ್ಕಾರ ಸರಿಯಾಗುತ್ತೆ ಎಂಬ ಆಶಯ ಇತ್ತು. ಆದರೆ ಸರಿಯಾಗದ ಹಂತಕ್ಕೆ ಬಂದಿದ್ದರಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ ಅಷ್ಟೇ. ರಾಜ್ಯಪಾಲರು ಏನು ಮಾಡುತ್ತಾರೋ ಕಾದು ನೋಡೋಣ ಎಂದರು.
ಕಳೆದ ಕೆಲವು ತಿಂಗಳಿಂದ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರಿದ್ದಾರೆ ಎನ್ನುತ್ತಿದ್ದಾರೆ. ಒಮ್ಮೆ ನೀವೇ ಗಮನಿಸಿ ಇಂದು ಬಿಜೆಪಿಯ ಯಾವುದೇ ಒಬ್ಬ ನಾಯಕ ರಾಜೀನಾಮೆ ನೀಡಿದ ಶಾಸಕರ ಮನೆಯಲ್ಲಿ ಕಾಣಿಸಿಕೊಂಡಿದ್ದಾರಾ? ನಾನು ಗಮನಿಸಿದಂತೆ ರಾಜೀನಾಮೆ ನೀಡಿದವರ ಜೊತೆ ಯಾರೂ ಕಾಣಿಸಿಕೊಂಡಿಲ್ಲ. ಇದರ ಹಿಂದೆ ಬಿಜೆಪಿಯ ಯಾವ ನಾಯಕರ ಕೈವಾಡವಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಈ ರಾಜೀನಾಮೆ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಸಂವಿಧಾನತ್ಮಾಕವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದು, ನಾವು ಅವರ ಆದೇಶ ಪಾಲನೆ ಮಾಡಲಿದ್ದೇವೆ ಎಂದು ತಿಳಿಸಿದರು.