ಮಂಡ್ಯ: ಗಾಂಧಿ, ಅಂಬೇಡ್ಕರ್ ಹಾಗೂ ಗೋವಿನ ಶಾಪ ತಟ್ಟಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿದೆ ಎಂದು ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಪಹಾಸ್ಯ ಮಾಡಿದರು.
ಸಕ್ಕರೆನಾಡು ಮಂಡ್ಯದ ಬಾಲಗಂಗಾಧರ್ ಸಮುದಾಯ ಭವನದಲ್ಲಿ ನಡೆಯುತ್ತಿರುವ ಜನಸೇವಕ್ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್‌ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರು ಬೆಳ್ಳಿ ಗದೆ ಉಡುಗೊರೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಶಾಪದಿಂದ ಸರ್ವನಾಶವಾಗಿದೆ. ಏಕೆಂದರೆ 70 ವರ್ಷ ಅಧಿಕಾರ ಸವಿದ ಕಾಂಗ್ರೆಸ್ಗೆ ಈಗ ಅಸ್ತಿತ್ವ ಇಲ್ಲದಾಗಿದೆ. ಬಿಜೆಪಿ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ. ನಾಯಕತ್ವದ ಬದಲಾವಣೆ ಇರೋದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದ ಅವರು, ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ 3 ಹೋಳಾಗಲಿದೆ. ಭಾರತೀಯ ಜನತಾಪಕ್ಷ ಒಂದೇ ಪಾರ್ಟಿಯಾಗಿ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸೋತ ಯೋಗೇಶ್ವರ್ಗೆ ಮಂತ್ರಿ ಸ್ಥಾನ ಯಾಕೆ?... ತಿಪ್ಪಾರೆಡ್ಡಿ ಪ್ರಶ್ನೆ
ನಾನು ರಾಜ್ಯಾಧ್ಯಕ್ಷನಾದ ಮೇಲೆ ಇಡೀ ರಾಜ್ಯದ ನಕ್ಷೆ ನೋಡಿದ್ದೇನೆ. ಆ ನಕ್ಷೆಯಲ್ಲಿ ಬೇರೆ ಎಲ್ಲಾ ಕಡೆ ಕೇಸರಿ ಕಾಣಿಸುತ್ತಿತ್ತು, ಮಂಡ್ಯದಲ್ಲಿ ಮಾತ್ರ ಹಸಿರು ಕಾಣಿಸುತ್ತಿತ್ತು. ಆದರೆ ಇವಾಗ ಹಸಿರು ಹೋಗಿದೆ ಕೇಸರಿ ಬಂದಿದೆ. ಮಂಡ್ಯದಲ್ಲಿ ಬಿಜೆಪಿಗೆ ಶ್ರಮಿಸಿದವರಿಗೆಲ್ಲ ಅಭಿನಂದನೆ ತಿಳಿಸಿದರು. ಕುಟುಂಬ ರಾಜಕಾರಣ ಮೆಟ್ಟಿ ನಿಂತು ಮೊಟ್ಟ ಮೊದಲ ಬಾರಿಗೆ ಕೇಸರಿ ಹಾರಿಸಿದ್ದೀರಿ. ಗೆದ್ದವರಿಗೂ ಸೋತವರಿಗೂ ಅಭಿನಂದನೆಗಳು. ಮುಂದಿನ ಬಾರಿ 7 ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಗೆಲ್ಲುವುದು ಖಚಿತವಾಗಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಾರಾಯಣಗೌಡರು ಗದೆ ಕೊಟ್ಟಿದ್ದಾರೆ. ಯಾಕಂದ್ರೆ ಕಾಂಗ್ರೆಸ್ನವರ ತಲೆ ಒಡೆದು ಹೊರ ಹಾಕಲು. ನನಗೆ ವಿಶ್ವಾಸವಿದೆ ಮುಂದಿನ ದಿನ ರಾಜ್ಯದಲ್ಲಿ 150 ಸ್ಥಾನ ಬಿಜೆಪಿ ಗೆಲ್ಲುತ್ತದೆ ಎಂದರು