ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯದಲ್ಲಿ ದಳಪತಿಗಳು ಅಲರ್ಟ್ ಆಗಿದ್ದಾರೆ. ಹಿಂದಿನ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಜೆಡಿಎಸ್ ನಾಯಕರು ಎಚ್ಚೆತ್ತಿದ್ದು, ಶತಾಯಗತಾಯವಾಗಿ ಮಂಡ್ಯ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ರೀ ಎಂಟ್ರಿ ಕೊಡಲು ಜೆಡಿಎಸ್ ನಾಯಕರು ಆಹ್ವಾನ ಕೊಟ್ಟಿದ್ದಾರೆ. ಹಾಗಿದ್ರೆ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಮತ್ತೆ ನಿಖಿಲ್ ರೀ ಎಂಟ್ರಿ ಕೊಡ್ತಾರಾ? ಎಂಬ ಪ್ರಶ್ನೆ ಸ್ಥಳೀಯ ರಾಜಕಾರಣಿಗಳಲ್ಲಿ ಮೂಡಿದೆ.
ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ವಿರುದ್ಧ ಸೋತಿದ್ದರು. ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಗೆದ್ದಿದ್ದರು. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ 6 ಸ್ಥಾನವನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆದುಕೊಂಡಿದೆ. ಆದ್ರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ.
ಈಗಾಗಲೇ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ನಾಯಕರು ಆಹ್ವಾನ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಅಥವಾ ಹೆಚ್ಡಿಕೆ ಅವರನ್ನು ನಿಲ್ಲಿಸಲು ಜೆಡಿಎಸ್ ನಾಯಕರ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.
ನಿಖಿಲ್ ಸ್ಪರ್ಧೆಗೆ ನಮ್ಮೆಲ್ಲರ ಒತ್ತಾಯವಿದೆ: ಈ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಜೆಡಿಎಸ್ ನಾಯಕರು ಪ್ರತಿಕ್ರಿಯಿಸಿದ್ದು, ನಾವು ಎಲ್ಲರೂ ಲೋಕಸಭಾ ಚುನಾವಣೆಗೆ ರೆಡಿ ಇದ್ದೇವೆ. ನಮ್ಮ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಜೊತೆಯಾಗಿ ಹೋಗಲು ತೀರ್ಮಾನ ಮಾಡಲಾಗಿದೆ. ನಮ್ಮ ವರಿಷ್ಠರ ತೀರ್ಮಾನದ ಪ್ರಕಾರ ಹೋಗ್ತೇವೆ. ನಿಖಿಲ್ ಸ್ಪರ್ಧೆ ಮಾಡಬೇಕು ಅನ್ನೋದು ನಮ್ಮೆಲ್ಲರ ಒತ್ತಾಯವಾಗಿದೆ ಎಂದಿದ್ದಾರೆ.
ಅದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗಾಗಲೇ ನಿಖಿಲ್ ಜೊತೆ ಚರ್ಚೆ ಮಾಡಲಾಗಿದೆ. ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿಗೆ. ನಿಖಿಲ್ ಬರದಿದ್ದರೆ, ಸರ್ವೆ ಮಾಡಿಸಿ ಜನರ ಪರ ಒಲವು ಇರುವವರಿಗೆ ಕೊಡ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ನಿಖಿಲ್ ಭಯಪಟ್ಟಿಲ್ಲ ಅವರ ಜೊತೆ ನಾವು ಇರ್ತೇವೆ. ಡಿಸೆಂಬರ್ ಬಳಿಕ ಅದರ ಬಗ್ಗೆ ನಿಮಗೆ ಗೊತ್ತಾಗಲಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಇನ್ನೂ ತೀರ್ಮಾನವಾಗಿಲ್ಲ: ಪಕ್ಷ ಸಂಘಟನೆ, ಚುನಾವಣೆ ಮಾಡುವ ವಿಚಾರದಲ್ಲಿ ನಾವು ತಯಾರಿದ್ದೇವೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಇನ್ನೂ ತೀರ್ಮಾನವಾಗಿಲ್ಲ, ಬಳಿಕ ಹೇಳ್ತೇವೆ. ಬೆಂಬಲ ಕೊಟ್ಟವರೆಲ್ಲ ಹೋಗಿ ಗೂಡಿಗೆ ಸೇರಿಕೊಂಡಿದ್ದಾರೆ. ಬೆಂಬಲ ಕೊಟ್ಟವರೆಲ್ಲ ಅವರ ಜೊತೆ ಇದ್ದಾರಾ? ನಮ್ಮ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ. ನಿಖಿಲ್ ಅರ್ಜಿ ಹಾಕುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಕ್ಷ ತೀರ್ಮಾನ ಮಾಡುತ್ತೆ, ನಾವು ಒಗ್ಗಟ್ಟಿನಿಂದ ಇರ್ತೇವೆ ಎಂದಿದ್ದಾರೆ.
ಕುಮಾರಸ್ವಾಮಿ ಅವರನ್ನು ಕರೆಯಲು ತೀರ್ಮಾನ ಮಾಡ್ತಿದ್ದೇವೆ. ಮೊದಲನೆಯದಾಗಿ ನಿಖಿಲ್ ಗೆ ಒತ್ತಾಯ ಮಾಡ್ತೇವೆ. ಬೀದಿ ಬೀದಿಗಳಲ್ಲಿ ಜನರು ಕಾಂಗ್ರೆಸ್ ಬೋಗಸ್ ಗ್ಯಾರಂಟಿ ಬಗ್ಗೆ ಮಾತನಾಡ್ತಿದ್ದಾರೆ. ಸಮಯ ಬಂದಾಗ ಬುದ್ಧಿ ಕಲಿಸುತ್ತಾರೆ ಎಂದು ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ಮಾಹಿತಿ ಬಿಚ್ಚಿಟ್ಟು ಸಂಸದೆ ಸುಮಲತಾಗೆ ಪರೋಕ್ಷವಾಗಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಟಾಂಗ್ ಕೊಟ್ಟಿದ್ದಾರೆ.
ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ದಳಪತಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದ್ರೆ ಮತ್ತೆ ಮಂಡ್ಯ ಲೋಕಸಭಾ ಚುನಾವಣಾ ಅಖಾಡಕ್ಕೆ ನಿಖಿಲ್ ಕುಮಾರಸ್ವಾಮಿ ಎಂಟ್ರಿ ಕೊಡ್ತಾರಾ, ಸಂಸದೆ ಸುಮಲತಾ ಮಂಡ್ಯ ಬಿಟ್ಟು ಕೊಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂಓದಿ:ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ವಾಪಸ್ ಪಡೆದ ಸರ್ಕಾರ