ಮಂಡ್ಯ: ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ವಿಮೋಚನೆಗಾಗಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಬಜರಂಗ ಸೇನೆ ಕಾರ್ಯಕರ್ತರು ಇಂದು ಮಂಡ್ಯದಲ್ಲಿ ಬೈಕ್ ಜಾಥಾ ನಡೆಸಿದರು. ಮಂಡ್ಯದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಸಲಾಯಿತು.
ಇದಕ್ಕೂ ಮೊದಲು ಮಂಡ್ಯದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೇರಿದ ನೂರಾರು ಕಾರ್ಯಕರ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಜಾಥಾದಲ್ಲಿ ಜಾಮಿಯಾ ಮಸೀದಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ 108 ಮಂದಿ ಪಾಲ್ಗೊಂಡಿದ್ದರು.
ಬಳಿಕ ಶ್ರೀರಂಗಪಟ್ಟಣದ ದೇವಸ್ಥಾನಕ್ಕೆ ಆಗಮಿಸಿದ ಜಾಥಾ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮನವಿ ಪ್ರತಿಯನ್ನು ಇಟ್ಟು ವಿಶೇಷ ಪೂಜೆ ನಡೆಸಿದರು. ಇದೇ ವೇಳೆ ಕಾನೂನು ಹೋರಾಟದಲ್ಲಿ ವಿಜಯ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಇನ್ನು, ಜಾಮಿಯಾ ಮಸೀದಿ ಸಂಬಂಧ ಹೈಕೋರ್ಟಿಗೆ ಮಾಡಿರುವ ಮನವಿಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅಕ್ರಮವಾಗಿ ನಡೆಯುತ್ತಿರುವ ಮದರಸವನ್ನು ತೆರವುಗೊಳಿಸಬೇಕು ಹಾಗೂ ವಿವಾದಿತ ಜಾಗವನ್ನು ದೇವಸ್ಥಾನ ಎಂದು ಘೋಷಿಸಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದನ್ನೂ ಓದಿ : ಸರಿಪಡಿಸಿ ಇಲ್ಲಾ ನಿಮ್ಮ ಮನೆ ಮುಂದೆ ಧರಣಿ.. ಸಂಸದ ಪ್ರತಾಪ್ ಸಿಂಹಗೆ ಜೆಡಿಎಸ್ ಶಾಸಕನ ಎಚ್ಚರಿಕೆ