ಮಂಡ್ಯ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದರು. ದಶಪಥ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವಾರ ರಾಮನಗರ ವ್ಯಾಪ್ತಿಯಲ್ಲಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ದರು.
ಇದೀಗ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗಡಿಭಾಗ ನಿಡಘಟ್ಟದಿಂದ ಮೈಸೂರು ಗಡಿಯವರೆಗೆ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಎಸ್ಪಿ ಎನ್.ಯತೀಶ್ ಜೊತೆಗಿದ್ದರು. ಹೆದ್ದಾರಿಯಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅಪಘಾತಕ್ಕೆ ಕಾರಣ ಸೇರಿದಂತೆ ಹಲವು ವಿಷಯಗಳ ಕುರಿತು ಎನ್ಹೆಚ್ಎಐ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಲೋಕ್ ಕುಮಾರ್ಗೆ ಹೆದ್ದಾರಿ ಕುರಿತು ವಾಹನ ಸವಾರರು ದೂರು ನೀಡಿದರು. ರಸ್ತೆಯ ಪಕ್ಕದಲ್ಲಿ ಕಲ್ಲು ಮಣ್ಣುಗಳು ಬಿದ್ದಿವೆ, ಸೂಕ್ತ ಕ್ರಮವನ್ನು ಹೆದ್ದಾರಿ ಪ್ರಾಧಿಕಾರ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವೃದ್ಧೆಯೊಬ್ಬರು ಕೈಮುಗಿದು ಅಳಲು ತೋಡಿಕೊಂಡರು. ''ಸ್ವಾಮಿ ಇವರು ಮಾಡಿರೋ ಕೆಲಸಕ್ಕೆ ನನ್ನ ಗುಡಿಸಲಿಗೆ ನೀರು ನುಗ್ಗುತ್ತಿದೆ. ಇವರು ಸರ್ವಿಸ್ ರಸ್ತೆಯ ಚರಂಡಿಯನ್ನು ಸರಿಯಾಗಿ ಮಾಡಿಲ್ಲ. ಮಳೆ ನೀರೆಲ್ಲ ನನ್ನ ಗುಡಿಸಲಿಗೆ ಬರುತ್ತಿದೆ. ನೆಮ್ಮದಿಯಾಗಿ ಬದುಕೋಕೆ ಆಗ್ತಾ ಇಲ್ಲ. ಅವರಿಗೆ ಹೇಳಿ ಸರಿ ಮಾಡಿಸಿ ಸ್ವಾಮಿ" ಎಂದು ಮನವಿ ಮಾಡಿದರು.
ಹೆದ್ದಾರಿಯನ್ನು ಕುಡುಕರಿಂದ ಮುಕ್ತಗೊಳಿಸಬೇಕು. ಹೆದ್ದಾರಿ ಲೋಕಲ್ ಬಾರ್ ಆಗಿದೆ. ಭಾನುವಾರ ಆಯ್ತು ಅಂದ್ರೆ ಸಾಕು ಕಾರಿನಲ್ಲಿ ಕುಡಿಯೋರ ಸಂಖ್ಯೆ ಹೆಚ್ಚಾಗಿದೆ. ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿ ಲೋಕಲ್ ಬಾರ್ ಮಾಡಿಕೊಂಡು ಕುಡಿಯುತ್ತಾರೆ. ಏನಾದ್ರು ಹೇಳಿದ್ರೆ ನಮಗೆ ಅವಾಜ್ ಹಾಕುತ್ತಾರೆ. ಇಂಥವರಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ. ತಕ್ಷಣವೇ ಕ್ರಮವಹಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ''ಇವತ್ತು ನಾನು ಪರಿಶೀಲನೆ ಮಾಡಿದಾಗ ಜನರು ತಮ್ಮ ಸಮಸ್ಯೆ ಹೇಳಿದ್ದಾರೆ. ಕೆಲವು ಕಡೆ ಸರ್ವಿಸ್ ರೋಡ್‌ನ ಫುಟ್‌ಪಾತ್ ಮಾಡಿಲ್ಲ. ಕೆಲವು ಕಡೆ ಅಂಡರ್ ಪಾಸ್ ಮಾಡಿಲ್ಲ. ಕೆಲವೆಡೆ ನೀರು ನುಗಿತ್ತಿದೆ. ಇದರಿಂದ ಅಪಘಾತಗಳು ಆಗುತ್ತಿವೆ. ಸರ್ವಿಸ್ ರೋಡ್‌ನಲ್ಲಿ ಫೆನ್ಸ್ ಸರಿಯಾಗಿ ಹಾಕಿಲ್ಲ. ಹೆದ್ದಾರಿಯಲ್ಲಿ ಸರಿಯಾಗಿ ಕ್ಯಾಮರಾ ಅಳಡಿಕೆಯಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ಕೆಲಸಗಳು ಬೇಗ ಆದ್ರೆ ಅಪಘಾತಗಳನ್ನು ತಡೆಯಲು ಸಾಧ್ಯ. ಸಾರ್ವಜನಿಕರು ಸುರಕ್ಷಿತ ಚಾಲನೆಯನ್ನು ಮಾಡಬೇಕು'' ಎಂದರು.
''ಜನರು ಸಹ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಹೆದ್ದಾರಿ ಪ್ರಾಧಿಕಾರದ ಕಡೆ ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಹೇಳಿದ್ದೇವೆ. ಬಹಳಷ್ಟು ಕಾರ್ಯಗಳು ಬಾಕಿ ಉಳಿದಿವೆ. ಬೇಗ ಕೆಲಸ ಮಾಡಿ ಎಂದು ನಾವು ಒತ್ತಡ ಹಾಕುತ್ತೇವೆ. ಹೆದ್ದಾರಿಯಲ್ಲಿ ಆಗುತ್ತಿರುವ ಅಪರಾಧಗಳನ್ನು ತಡೆಯಲು ಹೈವೇ ಪೆಟ್ರೋಲಿಂಗ್ ಹಾಕಿದ್ದೇವೆ. ಹೈವೇ ಪೆಟ್ರೋಲಿಂಗ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಹೈವೇ ಪೆಟ್ರೋಲಿಂಗ್ ಹಾಕಿದ್ದೇವೆ. ಕೆಟ್ಟು ನಿಂತಿರುವ ಗಾಡಿಗಳ ಕಡೆ ಹೆಚ್ಚು ಗಮನ ಕೊಡಬೇಕು'' ಎಂದು ಹೇಳಿದರು.
ಅಪಘಾತದಲ್ಲಿ 64 ಜನ ಸಾವು: ''ಬಹಳಷ್ಟು ಜನ ಸುಮ್ಮನೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ತಡೆಯಲು ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಗಮನ ಕೊಡುತ್ತಿದ್ದೇವೆ. ಟೋಲ್ ಬಳಿ ವಾಹನಗಳ ತಪಾಸಣೆ ಮಾಡುತ್ತೇವೆ. ಯಾವ ವಾಹನಗಳಿಗೆ ಸರಿಯಾದ ಹಾರ್ನ್ ಇರಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅತೀಯಾದ ವೇಗದ ಮೇಲೆ ಕಡಿವಾಣ ಹಾಕುತ್ತೇವೆ. ಅತಿಯಾಗಿ ವೇಗವಾಗಿ ವಾಹನ ಚಲಾಯಿಸಿದರೆ, ದಂಡ ಹಾಕುವುದರ ಜೊತೆಗೆ ಲೈಸೆನ್ಸ್ ರದ್ದು ಮಾಡುತ್ತೇವೆ. ಸದ್ಯಕ್ಕೆ ಹೈವೇಯಲ್ಲಿ ದ್ವಿಚಕ್ರ ವಾಹ ಓಡಾಡುತ್ತಿವೆ. ದ್ವಿಚಕ್ರ ವಾಹನ ರದ್ದಿಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿದ್ದಾರೆ. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 64 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 58 ಜನರು ರಾಮನಗರ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ್ದಾರೆ. ಡೋಲ್ ಗೇಟ್ ಬಳಿ ಇನ್ನೂ ಮುಂದೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡುತ್ತೇವೆ'' ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ರೇಸಿಂಗ್ ಟ್ರ್ಯಾಕ್ ಅಲ್ಲ; ಅಪಘಾತಗಳಿಗೆ ಚಾಲಕರ ಬೇಜವಾಬ್ದಾರಿ ಕಾರಣ- ಪ್ರತಾಪ್ ಸಿಂಹ