ಮಂಡ್ಯ: ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ರಣಕಹಳೆ ಮೊಳಗಿಸುವ ಮೂಲಕ ಪ್ರಚಾರ ಆರಂಭ ಮಾಡಿದ್ದಾರೆ.
ಪಾಂಡವಪುರದ ಟಿಎಪಿಸಿಎಂಎಸ್ ಭವನದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ರಣಕಹಳೆ ಮೊಳಗಿಸುವ ಮೂಲಕ ಅಭಿಷೇಕ್, ತಾಯಿಯ ಪರ ಪ್ರಚಾರ ಆರಂಭಿಸಿದರು.
ಸುಮಲತಾ ಬೆಂಬಲಿಸಲು ಕರೆದಿದ್ದ ರೈತ ಸಂಘದ ಸಭೆಯಲ್ಲಿ ಸುನೀತಾ ಪುಟ್ಟಣ್ಣಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ, ಮಂಡ್ಯ ಜಿಲ್ಲಾ ಚುನಾವಣಾ ಕಾಂಗ್ರೆಸ್ ಉಸ್ತುವಾರಿ, ಚಿನಕುರಳಿ ಸಿ.ಆರ್ ರಮೇಶ್, ಎಲ್.ಸಿ.ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಪಾಲ್ಗೊಂಡ ಅಭಿಷೇಕ್ ತಮ್ಮ ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡು ರೈತ ಸಂಘದ ಬೆಂಬಲ ಕೋರಿದರು. ಅಲ್ಲದೆ ರಣಕಹಳೆ ಮೊಳಗಿಸುವ ಮೂಲಕ ಗಮನ ಸೆಳೆದರು.
ಸುಮಲತಾ ಪ್ರಚಾರದಲ್ಲಿ ಹಾರಾಡಿದ ಕಾಂಗ್ರೆಸ್ - ಬಿಜೆಪಿ ಬಾವುಟ:
ಅತ್ತ ಸುಮಲತಾ ಅಂಬರೀಶ್ರ ಪುತ್ರ ಅಭಿಷೇಕ್ ರಣಕಹಳೆ ಮೊಳಗಿಸಿದರೆ, ಇತ್ತ ಸುಮಲತಾ ಮತ ಬೇಟೆಯ ಮ್ಯಾಜಿಕ್ ಆರಂಭಿಸಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಪ್ರಚಾರ ಪ್ರಾರಂಭಿಸಿರುವ ಸುಮಲತಾ, ಮೈತ್ರಿ ಅಭ್ಯರ್ಥಿಗೆ ಟಾಂಗ್ ನೀಡಿದ್ದಾರೆ.
ವಿಶೇಷವೆಂದರೆ ಸುಮಲತಾ ಬೆಂಬಲಿಗರು ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳನ್ನು ಹಿಡಿದುಕೊಂಡು ಪ್ರಚಾರವನ್ನು ಮಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಎರಡು ಪಕ್ಷಗಳ ಬಾವುಟಗಳು ರಾರಾಜಿಸುತ್ತಿವೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಕಚ್ಚಾಡುತ್ತಿದ್ದಾರೆ. ಆದರೆ ಮಂಡ್ಯದಲ್ಲಿ ಮಾತ್ರ ಕಾರ್ಯಕರ್ತರು ಜೊತೆಗೂಡಿದ್ದಾರೆ.