ಮಂಡ್ಯ: ತನ್ನ ತಾಯಿಯ ಅಸ್ಥಿ ವಿಸರ್ಜನೆಗೆ ಬಂದಿದ್ದ ವ್ಯಕ್ತಿಯೋರ್ವ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶ್ರೀರಂಗಪಟ್ಟಣದ ಕಾವೇರಿ ನದಿ ಸಂಗಮದಲ್ಲಿ ನಡೆದಿದೆ.
ಬೆಂಗಳೂರಿನ ರಾಜಾಜಿ ನಗರದ ಶ್ರೀಕಾಂತ್ (45) ನೀರಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿ ಎನ್ನಲಾಗಿದೆ. ಇವರು ತಮ್ಮ ತಾಯಿ ಅಂಬುಜಾ ಅವರ ಅಸ್ಥಿ ವಿಸರ್ಜನೆಗಾಗಿ ಬಂದಿದ್ದರು. ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದು, ಎಲ್ಲಾ ಪೂಜೆ ಮುಗಿಸಿ ಅಸ್ಥಿ ವಿಸರ್ಜನೆಗಾಗಿ ಕಾವೇರಿ ನದಿಗೆ ಇಳಿದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.
ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಶ್ರೀರಂಗಪಟ್ಟಣ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.