ಮಂಡ್ಯ: ಮಂಡ್ಯ ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರಸಿದ ಪ್ರಕರಣ ಸಂಬಂಧ ಪೊಲೀಸರಿಗೆ ಸಚಿವ ಎಸ್.ಟಿ. ಸೋಮಶೇಖರ್ ಕ್ಲಾಸ್ ತೆಗೆದುಕೊಂಡರು. ಮದ್ದೂರಿಗೆ ಆಗಮಿಸಿದ ಸಚಿವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಠಾಣೆ ಬಳಿ ಇರುವ ನೀರು ಮಿಶ್ರಿತ ಹಾಲಿನ ಟ್ಯಾಂಕರ್ಗಳ ವೀಕ್ಷಣೆ ಮಾಡಿ 10 ದಿನವಾದ್ರು ಯಾಕೆ ಯಾರನ್ನೂ ಅರೆಸ್ಟ್ ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಎಎಸ್‌ಪಿ ಧನಂಜಯಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಟ್ಯಾಂಕರ್‌ನ್ನು ಎಲ್ಲಿ ವಿನ್ಯಾಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ತಡಬಡಾಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಇಲ್ಲ ಸರ್ ಅದು ಎಲ್ಲಿ ಮಾಡಿದ್ದಾರೆ ಅಂತಾ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರಲ್ಲದೇ ಒಬ್ಬರನ್ನು ಬಂಧಿಸಿದ್ದೇವೆ ಎಂದು ಉತ್ತರಿಸಿದರು.
ಚಾಲಕನನ್ನು ಅರೆಸ್ಟ್ ಮಾಡಲು ನೀವೇ ಬೇಕಾ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಇಷ್ಟೊತ್ತಿಗೆ ಅರೆಸ್ಟ್ ಮಾಡಬೇಕಿತ್ತು. ಏನ್ ಮಾಡ್ತಾ ಇದೀರಾ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಇನ್ನಾದರೂ ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.