ಗಂಗಾವತಿ: ತಾಲ್ಲೂಕಿನ ದಾಸನಾಳ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಶಕದಿಂದ ಇಟ್ಟಿಗೆ ಭಟ್ಟಿಗಳ ಮೇಲೆ ಅವಲಂಬನೆಯಾಗಿರುವ ನೂರಾರು ಕುಟುಂಬಗಳ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸಿ ಮಾಲಿಕರು ಹಾಗೂ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹಳೆಯ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ್ದು, ಬಾಬುಜಗಜೀವನರಾಂ ವೃತ್ತದ ಮೂಲಕ ಶ್ರೀಕೃಷ್ಣ ದೇವರಾಯ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಕೆಲ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಎಂ.ಭಾಷಾಸಾಬು, ಸಲ್ಲದ ಆರೋಪ ಮಾಡುವ ಮೂಲಕ ತಮ್ಮನ್ನು ಕೆಲ ಸಂಘಟನೆಗಳು ಒಕ್ಕಲೆಬ್ಬಿಸಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿವೆ ಎಂದು ಆರೋಪಿಸಿದರು.