ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿರುವ ತೆರೆದ ಬಾವಿ, ಚರಂಡಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಾವಿಯ ಬಳಿ ಹೋಗಲೂ ಭಯವಾಗುವ ಸನ್ನಿವೇಶವಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ನೆಲಭರ್ತಿಯಾಗಿ ನೀರು ತುಂಬಿಕೊಂಡಿರುವ ಈ ಬಾವಿ ಕುಷ್ಟಗಿ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಛಯ ಆವರಣದಲ್ಲಿದೆ. ಹೈದರಾಬಾದ್ ನಿಜಾಂ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಬಾವಿಯ ಕಲ್ಲಿನ ಕಟ್ಟಡ ಕುಸಿತಗೊಂಡಿದೆ. ತಡೆಗೋಡೆಯೂ ಇಲ್ಲದ ಈ ಬಾವಿಗೆ ಚರಂಡಿ ನೀರು ತುಂಬಿಕೊಂಡಿದೆ.
ಕುಸಿದಿರುವ ಈ ಬಾವಿಯ ಪಕ್ಕದಲ್ಲೇ ದೇವಸ್ಥಾನವಿದೆ. ಅಲ್ಲಿಗೆ ಜನರು ಬರುತ್ತಾರೆ. ಅಲ್ಲದೆ, ಪೊಲೀಸ್ ಕ್ವಾಟ್ರಸ್‌ನ ಮಕ್ಕಳು ಆಟವಾಡಲು ಬರುತ್ತಾರೆ. ಬಾವಿ ನೆಲಮಟ್ಟದಲ್ಲಿದ್ದು ಏನಾದರೂ ಅನಾಹುತವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ರವೀಂದ್ರ ಬಾಕಳೆ
ಕುಸಿದ ಈ ಬಾವಿಯ ಬಗ್ಗೆ ಕುಷ್ಟಗಿ ಪುರಸಭೆಗೂ ಗೊತ್ತಿದೆ. ಚರಂಡಿಯಿಂದ ಬಾವಿಗೆ ನೀರು ಬಂದು ಬಾವಿ ತುಂಬಿಕೊಂಡಿದೆ. ನೀರು ತುಂಬಿದ ಪರಿಣಾಮ ಬಾವಿ ದಡದ ಮಣ್ಣು ಕುಸಿಯುತ್ತಿದೆ. ತಡೆಗೋಡೆಯ ಕಲ್ಲುಗಳು ಬಾವಿಯೊಳಗೆ ಬಿದ್ದಿವೆ. ಅಲ್ಲಲ್ಲಿ ನೆಲ ಬಿರುಕು ಬಿಟ್ಟಿದ್ದು ಮಣ್ಣು ಕುಸಿಯುವ ಸಾಧ್ಯತೆ ಇದೆ. ಈಗಾಗಲೇ ಪುರಸಭೆ ಅಧಿಕಾರಿಗಳು ನೋಡಿಕೊಂಡು ಹೋಗಿದ್ದಾರೆ. ಆದಷ್ಟು ಬೇಗನೆ ಈ ಬಾವಿಯನ್ನು ಸಂಪೂರ್ಣವಾಗಿ ಮುಚ್ಚಲು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಪಾಟೀಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇನ್ಮೇಲಾದ್ರೂ ನಿರುಪಯುಕ್ತ ಬಾವಿಗಳನ್ನು ಮುಚ್ಚುವ ಅಥವಾ ಬಾವಿಯ ಸುತ್ತಲೂ ಫಿನಿಶಿಂಗ್ ಮಾಡುವ ಮೂಲಕ ಸಂಭಾವ್ಯ ಅಪಾಯ ತಡೆಗಟ್ಟಲು ತಕ್ಷಣ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕಿದೆ.