ಕುಷ್ಟಗಿ(ಕೊಪ್ಪಳ) : ಸಾರ್ವಜನಿಕ ಉದ್ದೇಶಕ್ಕೆ ನಿರ್ಮಿಸಲಾದ ಕಟ್ಟಡವನ್ನು ಖಾಸಗಿಯವರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ತಯಾರಿ ಸದ್ದಿಲ್ಲದೇ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಷ್ಟಗಿ ಪಟ್ಟಣದ 6ನೇ ವಾರ್ಡನಲ್ಲಿ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಉದ್ದೇಶಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. 12ನೇ ಏಪ್ರೀಲ್ 2006ರಲ್ಲಿ ಡಾ.ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ಸದರಿ ಕಲ್ಯಾಣ ಮಂಟಪಕ್ಕೆ ಡಾ.ರಾಜ್ಕುಮಾರ್ ಅವರ ಹೆಸರು ಇಡಲಾಗಿತ್ತು.
ನಂತರದ ವರ್ಷಗಳಲ್ಲಿ ಸಭೆ-ಸಮಾರಂಭ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗಿದ್ದ ಕಟ್ಟಡ ನಿರ್ಲಕ್ಷ್ಯಕ್ಕೀಡಾಗಿ ಕುಡುಕರ ಅಡ್ಡೆಯಾಗಿತ್ತು. ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ, ಕಲಾವಿದರು ದುರಸ್ತಿಗೆ ಒತ್ತಾಯಿಸಿದ ಬಳಿಕ ಪುರಸಭೆ 14ನೇ ಹಣಕಾಸು ಯೋಜನೆ ಅಡಿಯಲ್ಲಿ 6.80 ಲಕ್ಷ ರೂ. ಬಳಸಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಈ ಕಲ್ಯಾಣ ಮಂಟಪವನ್ನು ಸ್ಥಳೀಯ ಗಜೇಂದ್ರಗಡ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿಯವರೊಂದಿಗೆ ಒಳ ಒಪ್ಪಂದವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಬೆಳವಣಿಗೆಯ ಹಿನ್ನೆಲೆ ಸದ್ದಿಲ್ಲದೇ ಕಲ್ಯಾಣ ಮಂಟಪಕ್ಕೆ ಸುಣ್ಣಬಣ್ಣ ಬಳಿದು ಒಳಗೆ ಪೀಠೋಪಕರಣ, ಪ್ಲೆವುಡ್ ಅಳವಡಿಕೆ ಕಾರ್ಯ ನಡೆದಿದೆ. ಮೂಲಗಳ ಪ್ರಕಾರ ಸದರಿ ಕಲ್ಯಾಣ ಮಂಟಪ ಸ್ಥಳೀಯ ಗಜೇಂದ್ರಗಡ ಟೆಕ್ಸ್‌ಟೈಲ್ಸ್‌ಗೆ ಪ್ರತಿ ದಿನಕ್ಕೆ 500 ರೂ. ಬಾಡಿಗೆ ಕರಾರಿನ ಒಳ ಒಪ್ಪಂದವಾಗಿದೆ ಎನ್ನಲಾಗ್ತಿದೆ.
ಇದರಲ್ಲಿ ಪುರಸಭೆ ಅಧ್ಯಕ್ಷರು ಶಾಮೀಲಾಗಿರುವುದು ಗುಟ್ಟಾಗಿ ಉಳಿದಿಲ್ಲ. ಪುರಸಭೆ ಮುಖ್ಯಾಧಿಕಾರಿ ಗೊತ್ತಿದ್ದರೂ ಸುಮ್ಮನಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಸಾರ್ವಜನಿಕ ಕಲ್ಯಾಣ ಮಂಟಪವನ್ನು ಖಾಸಗಿಯವರಿಗೆ ನೀಡಿರುವುಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಕಲಾವಿದರು ಪುರಸಭೆಗೆ ಆಗಮಿಸಿ ಕೂಡಲೇ ಉದ್ದೇಶಿತ ಬಟ್ಟೆ ಅಂಗಡಿ ತೆರವಿಗೆ ಒತ್ತಾಯಿಸಿದ್ದಾರೆ. ಜ.31 ರಂದು ಪುರಸಭೆ ಸಾಮಾನ್ಯ ಸಭೆ ನಿಗದಿಯಾಗಿದ್ದು ಈ ಸಭೆಯಲ್ಲಿ ಈ ಕಲ್ಯಾಣ ಮಂಟಪ ವಿಷಯ ಪ್ರಸ್ತಾಪಿಸಲು ಕಾಂಗ್ರೆಸ್ ಪುರಸಭೆ ಸದಸ್ಯರು ಸಜ್ಜಾಗಿದ್ದಾರೆ.