ಕೊಪ್ಪಳ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಮುಂದೆ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟು ಮತ ಕೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಜಿಲ್ಲೆಯ ಕುಷ್ಟಗಿಯಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೆ ನಾಲ್ಕು ರಥಯಾತ್ರೆಗಳು ನಡೆಯುತ್ತಿವೆ. ಈ ರಥಯಾತ್ರೆ ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಈಗಾಗಲೇ 100 ಕ್ಷೇತ್ರಗಳಲ್ಲಿ ಸಂಕಲ್ಪ ಯಾತ್ರೆ ಸಂಚಾರ ಮುಗಿದಿದೆ. ರಥಯಾತ್ರೆಗೆ ಸಿಗುತ್ತಿರುವ ಜನಬೆಂಬಲ ಮತ್ತೆ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ಜನರು ಭರವಸೆ ಇಟ್ಟಿದ್ದಾರೆ. ಇಷ್ಟೊಂದು ಜನ ಬೆಂಬಲ ವ್ಯಕ್ತವಾಗೋದು ಮತ್ತೆ ಅಧಿಕಾರಕ್ಕೆ ಬರೋದು ಸಾಧ್ಯವಿದ್ದಾಗ ಮಾತ್ರ ಎಂದು ಹೇಳಿದರು.
ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ನೀಡಲಾಗಿದೆ: ದೇಶದಲ್ಲಿ ಮೊದಲು ಟಾಯ್ಸ್ ಕ್ಲಸ್ಟರ್ ಕೊಪ್ಪಳದ ಬಾಣಾಪುರದಲ್ಲಿ ಆರಂಭವಾಗುತ್ತದೆ. ಹಾಗಾಗಿ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಜನರಿಗೆ ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅಂಜನಾದ್ರಿಯನ್ನು ರಾಮಾಯಣ ಸರ್ಕ್ಯೂಟ್ ಗೆ ಜೋಡಿಸುತ್ತೇವೆ. ಅಂಜನಾದ್ರಿ ಅಭಿವೃದ್ಧಿಗೆ ಈಗಾಗಲೇ 100 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಿ ಟಿ ರವಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ತಳಕಲ್ ಸೇರಿದಂತೆ ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಹೋದರೆ ಶೇಕಡಾ 80 ರಷ್ಟು ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಫಲಾನುಭವಿಗಳು ಸಿಗುತ್ತಾರೆ. ಅವರನ್ನೆಲ್ಲ ಮತದಾರರನ್ನಾಗಿ ಪರಿವರ್ತಿಸಿದರೆ ಬಿಜೆಪಿಗೆ ಸೋಲೆಂಬುದೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಿಯತ್ತು, ನೀತಿ ಹಾಗೂ ನೇತೃತ್ವ ಈ ಮೂರು ನೀತಿಗಳನ್ನಿಟ್ಟುಕೊಂಡು ಕೆಲಸ ಆರಂಭಿಸಿದ್ದೇವೆ. ನಮ್ಮದು ಕುಟುಂಬ ನೀತಿಯಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಇದು ನಮ್ಮ ನೀತಿ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಇದು ಕಾಂಗ್ರೆಸ್ ನೀತಿ. ಕಟ್ಟ ಕಡೆಯ, ದಲಿತರಿಗೆ ಬಲ ಕೊಡುವುದು ಬಿಜೆಪಿ ನೀತಿ. ಸಾಂಸ್ಕೃತಿಕ ಪುನರುತ್ಥಾನದ ಅಂಗವಾಗಿ ಆಕ್ರಮಣಕಾರರ ಇತಿಹಾಸವೇ ಭಾರತದ ಇತಿಹಾಸ ಎಂದು ಕಾಂಗ್ರೆಸ್ ಬಿಂಬಿತ ಮಾಡಿತ್ತು. ನಮ್ಮ ಬಿಜೆಪಿ ಸರ್ಕಾರದ ನೇತೃತ್ವ ಹೇಳಿ ಹೊಗಳಿಸಿಕೊಳ್ಳುವಂತಹದ್ದಲ್ಲ. ನಮ್ಮ ನೇತಾರರ ನಾಯಕತ್ವವನ್ನು ಗುರುತಿಸಿ ಗೌರವಿಸುತ್ತಾರೆ ಎಂದರು.
ಕಾಂಗ್ರೆಸ್‌ನದ್ದು ದ್ವಂದ್ವ ನಿಲುವಾಗಿದೆ- ಸಿ ಟಿ ರವಿ: ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ನಾಯಕತ್ವವೇ ಇಲ್ಲ. ನಮ್ಮ ಸಾರ್ವಭೌಮಕ್ಕೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ನೇತಾರರು ಮಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬುದು ಕಾಂಗ್ರೆಸ್‌ನದು. ಸೋತಾಗ ಇವಿಎಂ ಬಗ್ಗೆ ಅನುಮಾನ ಪಡೋದು, ಗೆದ್ದಾಗ ಜನರ ಆಶೀರ್ವಾದ ಎನ್ನೋದು ಕಾಂಗ್ರೆಸ್‌ನ ದ್ವಂದ್ವ ನಿಲುವಾಗಿದೆ ಎಂದು ಲೇವಡಿ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡುತ್ತೇವೆ. ರಾಜಕೀಯ ರಾಜಿಗೆ ಅವಕಾಶವಿಲ್ಲದಂತೆ ನಮಗೆ ಪೂರ್ಣ ಬಹುಮತ ಕೊಡಿ ಎಂದು ನಾವು ಜನರಲ್ಲಿ ಕೇಳಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್‌ನವರು ಜಾತ್ಯತೀತರು ಎಂದು ತಮಗೆ ತಾವೇ ಸರ್ಟಿಫಿಕೆಟ್ ಕೊಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದರು. ವೀರಶೈವ, ಲಿಂಗಾಯತ ಒಡೆಯುವ ಷಡ್ಯಂತ್ರ ಮಾಡಿದ್ದು, ಅದರ ಸ್ಕ್ರಿಪ್ಟ್, ಡೈರೆಕ್ಷನ್, ನಿರ್ಮಾಪಕರು ಎಲ್ಲಾ ಕಾಂಗ್ರೆಸ್ನವರೇ. ಈ ಬಗ್ಗೆ ಎಂ. ಬಿ ಪಾಟೀಲರನ್ನು ವೈಯಕ್ತಿಕವಾಗಿ ಕೇಳಿ ಹೇಳುತ್ತಾರೆ ಎಂದರು.
ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದು ಯಾಕೆ ಎಂದು ಸಿದ್ದರಾಮಯ್ಯ ಅವರನ್ನು ಕೇಳಿ ಎಂದ ಸಿ ಟಿ ರವಿ ಅವರು, ಒಂದು ವೇಳೆ ಮಾಡಾಳ್ ವಿರೂಪಾಕ್ಷಪ್ಪ ಕೇಸ್ ಕಾಂಗ್ರೆಸ್‌ನಲ್ಲಿ ಆಗಿದ್ದರೆ ಕ್ಲೀನ್ ಚಿಟ್ ಕೊಡುತ್ತಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ದಶಪಥ ಹೆದ್ದಾರಿ ಮಂಡ್ಯ ಜಿಲ್ಲೆಯ ಜನರಿಗೆ ಮಾರಣಾಂತಿಕ: ಹೆಚ್.ಡಿ.ಕುಮಾರಸ್ವಾಮಿ