ಗಂಗಾವತಿ(ಕೊಪ್ಪಳ): ಅಕ್ರಮ ಮರಳು ಮತ್ತು ಗಣಿಗಾರಿಕೆ ನಿಯಂತ್ರಣದಲ್ಲಿ ನಮ್ಮ ಇಲಾಖೆಯದ್ದು ಸಣ್ಣಪಾತ್ರ. ಆದರೆ, ಜಿಲ್ಲೆಯಲ್ಲಿನ ಸಾಮಾಜಿಕ ಪಿಡುಗಗಳ ವಿರುದ್ಧ ಹೆಚ್ಚಿನ ಗಮನಹರಿಸಿ ನಿಯಂತ್ರಣ ಮಾಡಲಾಗುವುದು ಎಂದು ಎಸ್ಪಿ ಟಿ. ಶ್ರೀಧರ್ ಹೇಳಿದರು.
ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗಂಗಾವತಿ ನಗರಕ್ಕೆ ಆಗಮಿಸಿದ್ದ ಅವರು, ಇಲ್ಲಿನ ವಿವಿಧ ಠಾಣೆಗಳಿಗೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ, ಜೂಜಾಟ, ಅಕ್ರಮ ಮದ್ಯ ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸಲಾಗುವುದು. ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಕ್ರಮ ಮರಳು, ಮದ್ಯ ದಂಧೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅಬಕಾರಿ ಇಲಾಖೆಗಳಿದ್ದು, ಅವರು ಕ್ರಮ ಕೈಗೊಳ್ಳುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯದಂತೆ ತಡೆಯಲು ನಮ್ಮ ಸಿಬ್ಬಂದಿ ಶ್ರಮಿಸಲಿದ್ದಾರೆ ಎಂದು ಶ್ರೀಧರ್ ಭರವಸೆ ನೀಡಿದರು.