ಕುಷ್ಟಗಿ/ಕೊಪ್ಪಳ: ಹಿರೇನಂದಿಹಾಳ ಕೆರೆಯಲ್ಲಿ ಮರಳು ದಿಬ್ಬ ಕುಸಿದು ಕೂಲಿ ಕಾರ್ಮಿಕನೋರ್ವ ಮೃತಪಟ್ಟಿದ್ದಾನೆ.
ಹಿರೇನಂದಿಹಾಳ ಗ್ರಾಮದ ಮಹಾದೇವಪ್ಪ ಸಕ್ರಪ್ಪ ಬುರುಡಿ (45) ಮೃತ ಕೂಲಿ ಕಾರ್ಮಿಕ. ಕೂಲಿ ಕಾರ್ಮಿಕ ಮಹಾದೇವಪ್ಪ ಬುರುಡಿಯನ್ನು ಗ್ರಾಮದ ಮರಳು ಸಾಗಾಣಿಕೆದಾರ ನಾಗಪ್ಪ ಹಿರೇಮನಿ ಎಂಬುವರು ಮರಳು ತುಂಬುವ ಕೆಲಸಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ. ಮರಳು ತುಂಬುವಾಗ ಮರಳು ದಿಬ್ಬ ಕುಸಿದು ಸ್ಥಳದಲ್ಲೇ ಕಾರ್ಮಿಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಹಾಗೂ ಇತರ ಕೂಲಿಕಾರರು ಸ್ಥಳದಿಂದ ಕಲ್ಕಿತ್ತಿದ್ದಾರೆ.
ಈ ಘಟನೆ ನಡೆದ ಸ್ಥಳದ ಪಕ್ಕದಲ್ಲಿ ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿತ್ತು. ಈ ಕೆಲಸಗಾರರು ಗಮನಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕೂಲಿ ಕಾರ್ಮಿಕ ಮಹಾದೇವಪ್ಪ ಬುರುಡಿ ಮೃತದೇಹವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ.
ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್ಐ ತಿಮ್ಮಣ್ಣ ನಾಯಕ ಭೇಟಿ ನೀಡಿದ್ದರು. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.