ಗಂಗಾವತಿ: ನಗರದ 33ನೇ ವಾರ್ಡಿನ ಹಿರೇಜಂತಕಲ್ನಲ್ಲಿ ಈಗಾಗಲೇ ಇರುವ ಚರಂಡಿಯ ಪಕ್ಕ ಮತ್ತೊಂದು ಚರಂಡಿ ನಿರ್ಮಾಣ ಮಾಡಲು ನಗರಸಭೆ ಮುಂದಾದ ಹಿನ್ನೆಲೆ, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಹಿರೇಜಂತಕಲ್ನ ದ್ಯಾಮವ್ವನಕಟ್ಟೆ ಪ್ರದೇಶದಲ್ಲಿ ಈ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪಿಸಿ ಸಾರ್ವಜನಿಕರು ಮೊದಲಿಗೆ ತಡೆಯಲು ಯತ್ನಿಸಿದರು. ಆದರೆ ಗುತ್ತಿಗೆದಾರ ರಾಜಕೀಯ ಪ್ರಭಾವ ಬಳಿಸಿ ಮತ್ತೆ ಕಾಮಗಾರಿ ಆರಂಭಿಸಿದ್ದರು. ಇದರಿಂದ ಅಸಮಾಧಾನಗೊಂಡ ಕೆಲ ಯುವಕರು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನೆಲೆ, ಕೂಡಲೇ ಕೊಪ್ಪಳ ನಗರ ಕೋಶಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಅವರ ಗಮನಕ್ಕೆ ತಂದು ಕಾಮಗಾರಿಗೆ ತಡೆ ಮಾಡಿಸಿದ್ದಾರೆ.
ಈಗಾಗಲೇ ಉದ್ದೇಶಿತ ಸ್ಥಳದಲ್ಲಿ ಚರಂಡಿ ಇದೆ. ಈ ಚರಂಡಿ ಉತ್ತಮ ಸ್ಥಿತಿಯಲ್ಲಿದ್ದರೂ ಸಹ ಇದರ ಪಕ್ಕದಲ್ಲಿಯೇ, ಅದೂ ಕೂಡ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಮತ್ತೊಂದು ಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿಕೊಟ್ಟಿದ್ದಾರೆ. ಹಣ ಲೂಟಿ ಮಾಡಲು ಈ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಚರಂಡಿ ವ್ಯವಸ್ಥೆ ಕಾರ್ಯದಿಂದಾಗಿ ಪ್ರತಿ ವರ್ಷ ನಡೆಯುವ ಐತಿಹಾಸಿಕ ಪ್ರಸನ್ನ ಪಂಪಾಪತಿ ದೇಗುಲದ ರಥೋತ್ಸವಕ್ಕೆ ತೊಂದರೆಯಾಗಲಿದೆ. ದ್ಯಾಮವ್ವನ ಪಾದಗಟ್ಟೆಯವರೆಗೂ ರಥ ಸಂಚರಿಸಲಿದ್ದು, ಎರಡೆರಡು ಚರಂಡಿಯಿಂದಾಗಿ ರಸ್ತೆ ಕಿರಿದಾಗಿ ಭಕ್ತರಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.