ಗಂಗಾವತಿ (ಕೊಪ್ಪಳ): ಸಂಸಾರದಲ್ಲಿನ ವಿರಸದಿಂದ ದಾಂಪತ್ಯ ಜೀವನಕ್ಕೆ ಮಂಗಳ ಹಾಡಿ ಜೀವನಾಂಶ ಕೋರಿ ಇಬ್ಬರು ಪತ್ನಿ ತಮ್ಮ ಪತಿಯಂದಿರ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಎರಡು ಪ್ರಕರಣಗಳು ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ಮತ್ತೆ ಸುಖಾಂತ್ಯ ಕಂಡಿವೆ. ಹೌದು, ನ್ಯಾಯಾಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಗಮನ ಸೆಳೆದಿದ್ದ ಈ ಎರಡು ಪ್ರಕರಣಗಳಲ್ಲಿನ ಸತಿ - ಪತಿಗಳನ್ನು ಮತ್ತೆ ಒಂದು ಮಾಡುವಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಯಶಸ್ವಿಯಾಗಿದರು.
14, 16 ವರ್ಷಗಳಿಂದ ಕೋರ್ಟ್ನಲ್ಲಿದ್ದ ಪ್ರಕರಣ: ಕಳೆದ ಹದಿನಾಲ್ಕು ವರ್ಷದ ಹಿಂದೆ ಜೋಡಿಯೊಂದು ಮದುವೆಯಾಗಿತ್ತು. ಅವರಿಗೆ ಎರಡು ಮಕ್ಕಳು ಇದ್ದರು. ಗಂಗಾವತಿ ತಾಲೂಕಿನ ಹೊಸಕೇರಿಯ ಉಮಾದೇವಿ ತಮ್ಮ ಪತಿ ಶಿವಶಂಕರ್ ವಿರುದ್ಧ ಜೀವನಾಂಶ ಕೋರಿ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಹದಿನಾರು ವರ್ಷದ ಹಿಂದೆ ಮದುವೆಯಾಗಿದ್ದ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಕವಿತಾ ಎಂಬುವವರು ತಮ್ಮ ಪತಿ ಶಿವಪ್ಪ ದ್ಯಾವಣ್ಣವರ್ ವಿರುದ್ಧ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದರು. ಅವರಿಗೆ ಮೂರು ಮಕ್ಕಳು ಇದ್ದಾರೆ.
ನ್ಯಾಯಾಧೀಶರಿಂದ ಸಮಾಲೋಚನೆ: ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮಾಡುವ ಮೂಲಕ ಬೇರೆಯಾಗಿದ್ದ ಎರಡು ಜೋಡಿಗಳನ್ನು ಮತ್ತೆ ಒಂದು ಉದ್ದೇಶದಿಂದ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೌರಮ್ಮ ಪಾಟೀಲ್ ಸಂಧಾನ ಮಾಡಿದರು. ಇದಕ್ಕೂ ಮೊದಲ ಎರಡು ಜೋಡಿಗಳನ್ನು ಪ್ರತ್ಯೇಕವಾಗಿ ಸಮಾಲೋಚನೆ ಮಾಡುವ ಮೂಲಕ ಸಂಸಾರ, ಮಕ್ಕಳ ಮುಂದಿನ ಭವಿಷ್ಯತ್ತಿನ ಬಗ್ಗೆ ಸತಿ-ಪತಿಗಳಿಗೆ ನ್ಯಾಯಾಧೀಶರು ಮನವರಿಕೆ ಮಾಡಿಕೊಟ್ಟರು. ಸಂಧಾನವನ್ನು ಯಶಸ್ವಿಯಾಗಿ ನಿಭಾಯಿಸಿದರು.
ನಾಲ್ಕು ವರ್ಷದ ಅಲೆದಾಟ: ಕಳೆದ ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳನ್ನು ಮತ್ತೆ ಒಂದು ಮಾಡುವಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ್ ನಾಯಕ್, ಹಿರಿಯ ಸಿವಿಲ್ ರಮೇಶ ಗಾಣಿಗೇರ, ಪ್ರಧಾನ ಸಿವಿಲ್ ಶ್ರೀದೇವಿ ದರ್ಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಗೌರಮ್ಮ ಪಾಟೀಲ್ ಅವರು ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯಾಯಾಧೀಶ ಸದಾನಂದ್ ನಾಯಕ್ ಸಲಹೆ: ಸೌಹಾರ್ದ, ಸಾಮರಸ್ಯದಿಂದ ಮಾತ್ರ ಜೀವನ ನಡೆಸಲು ಸಾಧ್ಯವಾಗುವಂತ ಇಂದಿನ ದಿನಗಳಲ್ಲಿ ಯಾವುದೇ ಕುಟುಂಬಗಳ ವ್ಯಾಜ್ಯಗಳು ಆಯಾ ಕುಟುಂಬದ ಹಿರಿಯ ಸಮಕ್ಷಮದಲ್ಲಿ ಇತ್ಯರ್ಥ ಮಾಡಿಕೊಂಡರೆ ಕುಟುಂಬ ನಿರ್ವಹಣೆ ಸುಲಭವಾಗಲಿದೆ ಎಂದು ನ್ಯಾಯಾಧೀಶ ಸದಾನಂದ್ ನಾಯಕ್ ಹೇಳಿದರು.
ಇದನ್ನೂ ಓದಿ: ಸೋತವನನ್ನು ಗೆಲ್ಲಿಸಿದ ಕೋರ್ಟ್.. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಪೂಜಾರಿ