ಗಂಗಾವತಿ: ಸಾರಿಗೆ ವಾಹನಗಳ ಸಮಸ್ಯೆಯಿಂದಾಗಿ ಕಾಲೇಜಿಗೆ ತೆರಳಲು ನಿತ್ಯ ಸರ್ಕಸ್ ಮಾಡಬೇಕಾದ ಸ್ಥಿತಿ ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಂದೊದಗಿದೆ. ವಿದ್ಯಾರ್ಥಿಗಳು ನಿತ್ಯವೂ ಪ್ರಾಣದ ಹಂಗು ತೊರೆದು ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದಾರೆ.
ತಾಲೂಕಿನ ಹತ್ತಾರು ಹಳ್ಳಿಗಳಿಂದ ಪದವಿ ಓದಲು ಮಕ್ಕಳು ಇಲ್ಲಿನ ಕೊಲ್ಲಿ ನಾಗೇಶ್ವರ ರಾವ್ ಸರ್ಕಾರಿ ಪದವಿ ಕಾಲೇಜಿಗೆ ಆಗಮಿಸುತ್ತಾರೆ. ಕಾಲೇಜು ನಗರದಿಂದ 3 ಕಿ.ಮೀ. ದೂರದಲ್ಲಿದೆ. ಹೀಗಾಗಿ ನೂರಾರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಸ್ ಅವಲಂಬಿಸಬೇಕಿದೆ. ಬೆಳಗೆ 9.30ಕ್ಕೆ ತರಗತಿ ಆರಂಭವಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಇಲ್ಲದ್ದರಿಂದ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಓಡಾಡುವ ಒಂದೆರಡು ಬಸ್ಗಳನ್ನೇ ಅವಲಂಬಿಸಿದ್ದಾರೆ.