ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯತ್ ನ ಉಳಿದ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಒಟ್ಟು 19 ಸದಸ್ಯ ಬಲದ ಭಾಗ್ಯನಗರ ಪಟ್ಟಣ ಪಂಚಾಯ್ತಿಯಲ್ಲಿ 10 ಬಿಜೆಪಿ, ಓರ್ವ ಪಕ್ಷೇತರ ಹಾಗೂ 8 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಓರ್ವ ಶಾಸಕ ಹಾಗೂ ಓರ್ವ ಸಂಸದರ ತಲಾ ಒಂದು ಮತ ಸೇರಿ ಒಟ್ಟು 21 ಮತಸಂಖ್ಯೆ ಆಗುತ್ತದೆ. ಮ್ಯಾಜಿಕ್ ನಂಬರ್ 11 ಆಗಿದೆ.
10 ಬಿಜೆಪಿ, ಓರ್ವ ಸಂಸದರ ಮತ ಹಾಗೂ ಓರ್ವ ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ ಬಿಜೆಪಿ ಸಂಖ್ಯಾಬಲ ಒಟ್ಟು 12 ಆಗುತ್ತದೆ. ಆದರೆ, 8 ಜನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಏಕೆಂದರೆ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಓರ್ವ ಶಾಸಕರ ಮತ ಹಾಗೂ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ನ ಬಲ 12 ಆಗಲಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾನ್ಯ ಮಹಿಳೆ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಹುಲಿಗೆಮ್ಮ ತಟ್ಟಿ ಗದ್ದುಗೆ ಏರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು ಈಗ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎನ್ನಲಾದ ಮೂವರು ಬಿಜೆಪಿ ಸದಸ್ಯರ ಪೈಕಿ ಓರ್ವ ಎಸ್ಸಿ ಮಹಿಳೆ ಇದ್ದು ಅವರೇ ಉಪಾಧ್ಯಕ್ಷರಾಗುವ ಸಂಭವ ದಟ್ಟವಾಗಿದೆ. ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆಯ ನಂತರ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.