ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿ ಬೈಕ್ ಹಾಗೂ ಮಿನಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಬೈಕ್ ಸವಾರ ಬೆಣಕಲ್ ಗ್ರಾಮದ ಸಂತೋಷ್ ವಂಕಿ (25), ಮಿನಿ ಬಸ್ ನಲ್ಲಿದ್ದ ಭೀಮವ್ವ (70), ರಂಗಪ್ಪ (80) ಹಾಗೂ ಶಿವಾನಂದಪ್ಪ (60) ಸಾವನ್ನಪ್ಪಿದ್ದಾರೆ. ಸುಮಾರು 8ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
34 ಜನರಿದ್ದ ಮಿನಿ ಬಸ್ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರುತ್ತಿತ್ತು. ಬೈಕ್ ಸವಾರನ ಅಜಾಗರೂಕತೆಯ ಚಾಲನೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಸುದ್ದಿ ತಿಳಿದ ಕೂಡಲೇ ಘಟನಾಸ್ಥಳಕ್ಕೆ ಎಸ್ಪಿ ಶ್ರೀಧರ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.