ಕೊಪ್ಪಳ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಜಿಲ್ಲೆಯ ಕುಕನೂರು ಪೊಲೀಸರು ಬಂಧಿಸಿದ್ದಾರೆ.
ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಸವರಾಜ ಬ್ಯಾಳಿ, ಮನ್ನಾಪುರ ತಾಂಡಾದ ಶಿವಪುತ್ರಪ್ಪ ರಾಠೋಡ್ ಹಾಗೂ ಮನ್ನಾಪುರದ ಬಸವರೆಡ್ಡಿ ಮೇಟಿ ಬಂಧಿತ ಆರೋಪಿಗಳು.
ಇತ್ತೀಚಿಗೆ ಕುಕನೂರು ತಾಲೂಕಿನ ಇಟಗಿ ಸೀಮಾದ ಹಿರೇಕೆರೆ ಚೆಕ್ ಡ್ಯಾಂ ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಕುರಿತಂತೆ ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆಯಾದ ವ್ಯಕ್ತಿ ಇಲಕಲ್ ಮೂಲದ ವಿರೂಪನಗೌಡ ಪಾಟೀಲ್ ಎಂದು ಗುರುತು ಪತ್ತೆಯಾಗಿತ್ತು.
ಪ್ರಕರಣ ಕುರಿತಂತೆ ತನಿಖೆ ನಡೆಸಿದಾಗ, ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ವಿರೂಪನಗೌಡ ಹಾಗೂ ಬನ್ನಿಕೊಪ್ಪ ಗ್ರಾಮದ ಬಸವರಾಜ ಬ್ಯಾಳಿ ನಡುವೆ ವೈಮನಸು ಉಂಟಾಗಿತ್ತು. ಇದರಿಂದ ವಿರೂಪಾಕ್ಷಗೌಡ ಕೊಲೆಗೆ ಬಸವರಾಜ ಬ್ಯಾಳಿ, ಮನ್ನಾಪುರ ತಾಂಡಾದ ಶಿವಪುತ್ರಪ್ಪ ರಾಠೋಡ್, ಹಾಗೂ ಮನ್ನಾಪುರದ ಬಸವರೆಡ್ಡಿ ಮೇಟಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದನ್ನು ತನಿಖೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಕುಕನೂರು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.