ಕೊಪ್ಪಳ: ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪಾದಯಾತ್ರೆ ನಡೆಸಿದ್ರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಭಾಗ್ಯ ನಗರದ ಮಹಾತ್ಮಗಾಂಧಿ ಸರ್ಕಲ್‌ನಿಂದ ಪ್ರಾರಂಭವಾದ ಪಾದಯಾತ್ರೆ ಬಸ್ ನಿಲ್ದಾಣದ ಮುಂಭಾಗ, ಅಶೋಕ ಸರ್ಕಲ್, ಜವಾಹರ ರಸ್ತೆ ಮೂಲಕ ಸಾಗಿ ಬಂದು ಗಡಿಯಾರ ಕಂಬ ಸರ್ಕಲ್ ಮೂಲಕ ಗವಿಮಠದ ಆವರಣದವರೆಗೂ ಸಾಗಿ ಮುಕ್ತಾಯಗೊಂಡಿತು.
ಸುಮಾರು 5 ಕಿ.ಮೀ. ವರೆಗೆ ನಡೆದ ಪಾದಯಾತ್ರೆ ಕೊನೆಗೊಂಡ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಇದು ಕೇವಲ ಪಾದಯಾತ್ರೆಯಾಗಿ ಉಳಿಯುವುದಿಲ್ಲ, ಸರ್ಕಾರದ ವಿರುದ್ಧದ ಹೋರಾಟವಾಗಿ ರೂಪುಗೊಳ್ಳಲಿದೆ ಎಂದರು.
ಸಿಎಂ ಯಡಿಯೂರಪ್ಪ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ನೆರೆ ಸಂತ್ರಸ್ತರಿಗೆ ಪರಿಹಾರ, ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಹಾಗೂ ರಾಜ್ಯದಲ್ಲಿ ಬರ ಬಂದಾಗ ಪ್ರಧಾನಿ ಮೋದಿ ತುಟಿ ಬಿಚ್ಚಲಿಲ್ಲ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ನಾವು ಹೋರಾಟ ಮಾಡುತ್ತೇವೆ. ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಎಚ್ಚರಿಸಿದ್ರು.