ಕೊಪ್ಪಳ: ನೆರೆ ಬಂದಾಗ ಮತ್ತು ಜಲಮೂಲಗಳು ತುಂಬಿದಾಗ ಹೆಚ್ಚಿನ ನೀರನ್ನು ಕೆರೆಗಳಲ್ಲಿ ಶೇಖರಿಸುವ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತಾಲೂಕಿನ ಕೋಳೂರು ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ವೀಕ್ಷಿಸಿದ ಬಳಿಕ ಮಾತನಾಡಿ, ನೆರೆ ಬಂದ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತದೆ. ಆ ನೀರನ್ನು ಕೆರೆಗಳಲ್ಲಿ ಶೇಖರಿಸಿ ಬೇಸಿಗೆ ಕಾಲದಲ್ಲಿ ಡಂಪ್ ಮಾಡುವ ಕುರಿತಂತೆ ದೊಡ್ಡ ಯೋಜನೆ ಅನುಷ್ಠಾನ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ನಾವು ಈಗಾಗಲೇ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ತುರ್ತು ಪರಿಹಾರ ನೀಡಿದ್ದೇವೆ. ಸೆಪ್ಟೆಂಬರ್ ಅಂತ್ಯದವರೆಗೂ ಮಳೆ ಇರುವುದರಿಂದ ನಿರೀಕ್ಷಿತ ನಷ್ಟದ ಪ್ರಮಾಣ ಮಾಡಲಾಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಹಣ ತಂದು ಕಾರ್ಯಕ್ರಮ ಅನುಷ್ಠಾನ ಮಾಡುವ ಶಕ್ತಿ ನಮಗಿದೆ. ತುರ್ತು ಕೆಲಸಗಳಿಗೆ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಜೊತೆಗೆ ಪ್ರವಾಹಪೀಡಿತ ಪ್ರದೇಶದ ಜನರಿಗೆ ಬ್ಯಾಂಕ್ನವರು ಸಾಲದ ಕಂತು ಪಾವತಿಸುವ ಬಗ್ಗೆ ಒತ್ತಾಯಿಸುವಂತಿಲ್ಲ. ನಾವು ಬ್ಯಾಂಕ್ನವರ ಜೊತೆ ಈಗಾಗಲೇ ಮಾತನಾಡಿದ್ದು, ಅವರಿಗೆ ಸೂಚನೆ ನೀಡಲಾಗಿದೆ. ಒಬ್ಬ ಮಂತ್ರಿ, ಒಬ್ಬ ಪ್ರಧಾನಿಯಿಂದ ಸರ್ಕಾರವಾಗುವುದಿಲ್ಲ, ಸಚಿವ ಸಂಪುಟ ಸೇರಿ ಸರ್ಕಾರವಾಗುತ್ತದೆ. ಅತ್ಯಂತ ಪ್ರಭಾವಿ ಮಂತ್ರಿ ಅಮಿತ್ ಶಾ ಅವರು ಈಗಾಗಲೇ ಬಂದು ಪ್ರವಾಹದ ಪರಿಸ್ಥಿತಿ ನೋಡಿದ್ದಾರೆ. ನಮ್ಮಲ್ಲಿ ಪ್ರವಾಹದಿಂದಾಗಿರುವ ನಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.