ಕೊಪ್ಪಳ: ನಮ್ಮ ಫೋನ್ ಕದ್ದಾಲಿಕೆಯಾಗಿರುವ ಬಗ್ಗೆ ಮೊದಲೇ ಅನುಮಾನವಿತ್ತು. ಈಗ ಅದು ನಿಜವಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ.
ಕೊಪ್ಪಳದ ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ನಮ್ಮ ಪಿಎ ಫೋನ್ ಕದ್ದಾಲಿಕೆಯಾಗಿದೆ ಎಂಬ ಅನುಮಾನ ಈ ಹಿಂದಿನಿಂದಲೂ ಇತ್ತು. ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಸಹ ಈ ಪ್ರಕರಣದಲ್ಲಿ ಶಾಮಿಲಾಗಿರುವುದರಿಂದ ಈ ಪ್ರಕರಣದ ಬಗ್ಗೆ ಎಸ್ಐಟಿ ಅಥವಾ ಸಿಐಡಿಯಿಂದ ತನಿಖೆಯಾಗಬೇಕು ಎಂದರು.
ಈ ಕದ್ದಾಲಿಕೆ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಬೇಕಾಗಿಲ್ಲ. ಅಂದು ಕುಮಾರಸ್ವಾಮಿ ಅವರ ಸರ್ಕಾರವಿತ್ತು. ಹೀಗಾಗಿ, ಸಹಜವಾಗಿ ಕುಮಾರಸ್ವಾಮಿ ಅವರ ಮೇಲೆ ಗುಮಾನಿ ಬರುತ್ತದೆ. ಸರ್ಕಾರ ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ತ್ವರಿತವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಂದು ನಾನು ಸಹ ಬೆಂಗಳೂರಿಗೆ ತೆರಳುತ್ತಿದ್ದು ಅನರ್ಹಗೊಂಡಿರುವ ಶಾಸಕರೆಲ್ಲರೂ ಸಭೆ ನಡೆಸುತ್ತೇವೆ. ಬಳಿಕ ಹೈಕೋರ್ಟ್ ಮೂಲಕ ಉನ್ನತ ತನಿಖೆಗೆ ಮನವಿ ಮಾಡುತ್ತೇವೆ ಎಂದರು.