ಗಂಗಾವತಿ: ಸಹ ಸದಸ್ಯರು ತಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಾಸನಬದ್ಧ ಅನುದಾನದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಮಾಡಿದ್ದು, ಬೋಗಸ್ ಬಿಲ್ ಮಾಡಿ ಹಣ ಎತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಕಾಂಗ್ರೆಸ್ ಸದಸ್ಯರು ತಮ್ಮದೇ ಪಕ್ಷದ ಜಿಪಂ ಅಧ್ಯಕ್ಷನ ಮೇಲೆ ಗಂಭೀರ ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿಯೇ ಪರಿಗಣಿಸಿದ ಅಧ್ಯಕ್ಷರು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಪಂ ಸಿಇಓ ರಘುನಂದನಮೂರ್ತಿ ಅವರಿಗೆ ನಿರ್ದೇಶನ ನೀಡಿದ್ದರು. ಇದೀಗ ಸಿಇಓ ವರದಿ ನೀಡಿದ್ದು, ಜಿಪಂ ಅಧ್ಯಕ್ಷ ವಿವೇಚನೆಯಡಿ ಅನಿರ್ಬಂಧಿತ ಅನುದಾನದಲ್ಲಿ ಕೈಗೊಂಡ 103 ಲಕ್ಷ ರೂಪಾಯಿ ಮೊತ್ತದಲ್ಲಿ ಯಾವುದೇ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಿಇಓ ವರದಿ ಆಧಾರಿಸಿ ಇದೀಗ ಜಿಪಂ ಅಧ್ಯಕ್ಷ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ತನ್ನ ಮೇಲಿನ ಸಹ ಸದಸ್ಯರ ಆರೋಪ ಕೇವಲ ರಾಜಕೀಯ ಪ್ರೇರಿತ ಎಂದು ಸ್ಪಷ್ಟಪಡಿಸಿದ್ದಾರೆ.