ಗಂಗಾವತಿ: ಅವಧಿಗೂ ಮುನ್ನವೇ ನಾಟಿ ಮಾಡಿದ ಸಸಿಯಲ್ಲಿ ತೆನೆ ಬಿಡುತ್ತಿರುವ ಭತ್ತದ ಕ್ಷೇತ್ರಕ್ಕೆ ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು, ಗಂಗಾವತಿಯ ಕೃಷಿ ವಿಜ್ಞಾನ ಮತ್ತು ಸಂಶೋಧನೆ ಕೇಂದ್ರದ ಸಿಬ್ಬಂದಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಮರಳಿ ಹೋಬಳಿಯ ಜಂಗಮರ ಕಲ್ಗುಡಿ ಹಾಗೂ ಹೊಸಕೇರಾ ಗ್ರಾಮಗಳ ಸೀಮೆಯಲ್ಲಿ ನಾಟಿ ಮಾಡಿರುವ ಭತ್ತದ ಕ್ಷೇತ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು, ರೈತರಿಂದ ಮಾಹಿತಿ ಕಲೆ ಹಾಕಿದರು. ಬಳಿಕ ಕೆಲ ಸ್ಯಾಂಪಲ್ ಸಂಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ರೈತರು, ಐಆರ್ ಮತ್ತು ಕಾವೇರಿ ಸೋನಾ ತಳಿ ನಾಟಿ ಮಾಡಿದ ಬೀಜದಲ್ಲಿಯೇ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದರು. ಹವಾಮಾನ ವೈಪರೀತ್ಯದಿಂದ ಈ ರೀತಿಯ ಸಮಸ್ಯೆಯಾಗಿದ್ದು, ಮತ್ತೊಮ್ಮೆ ಪ್ರಯೋಗಾಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸುವುದಾಗಿ ಕೃಷಿ ವಿಜ್ಞಾನಿ ತಿಳಿಸಿದ್ದಾರೆ.