ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿ ಸ್ಮಶಾನ ಭೂಮಿಗೆ ವ್ಯಕ್ತಿಯೋರ್ವ ತಂತಿ ಬೇಲಿ ಹಾಕಿ ಆಕ್ರಮಿಸಿಕೊಂಡಿದ್ದು, ಇದರಿಂದ ಶವ ಸಂಸ್ಕಾರಕ್ಕೆ ಅಡ್ಡಿಯಾಗುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.
ನಿಡಶೇಸಿ ಗ್ರಾಮದ ವಣಗೇರಾ ರಸ್ತೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಹಲವು ತಲೆಮಾರುಗಳಿಂದ ಹಿಂದುಳಿದ ಸಮಾಜದವರ ಶವಸಂಸ್ಕಾರ ನಡೆಯುತ್ತಿದೆ. ಆದರೆ ವ್ಯಕ್ತಿಯೋರ್ವ ಸ್ಮಶಾನ ಭೂಮಿ ಸ.ನಂ. 114 ರ 1 ಎಕರೆ 24 ಗುಂಟೆ ಜಮೀನನ್ನು ತಾವು ಖರೀದಿಸಿದ್ದು, ಶವ ಸಂಸ್ಕಾರ ಬೇರೆಡೆ ಮಾಡಿಕೊಳ್ಳುವಂತೆ ತಿಳಿಸಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ.
ಕಳೆದ ಮೇ 1ರಂದು ಮಹಿಳೆ ಮೃತಪಟ್ಟ ಸಂದರ್ಭದಲ್ಲಿ ಈ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರ ಮಾಡಿದ್ದರಿಂದ, ಭೂಮಿಯ ಮಾಲೀಕ ಎಂದು ಹೇಳಿಕೊಳ್ಳುವ ವ್ಯಕ್ತಿಯು ಮೃತ ಮಹಿಳೆಯ ಪತಿ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ಹೀಗಾಗಿ ಗ್ರಾಮಸ್ಥರು ಬುಧವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ತಹಶೀಲ್ದಾರ ಎಂ. ಸಿದ್ದೇಶ ಅವರರನ್ನು ಭೇಟಿ ಮಾಡಿ ಈ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.
ಈ ಮನವಿಗೆ ತಹಶೀಲ್ದಾರ ಎಂ. ಸಿದ್ದೇಶ ಅವರು, ಗುರುವಾರ ಸ್ಮಶಾನ ಭೂಮಿ ಪರಿಶೀಲಿಸಿ ಮರು ಸರ್ವೆಗೆ ಆದೇಶ ನೀಡಿ, ವಿವಾದ ಇತ್ಯಾರ್ಥವಾಗುವರೆಗೂ ಈ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರ ಮಾಡುವಂತೆ ಸೂಚಿಸಿದರು. ನಂತರ ಪಿಎಸ್ಐ ತಿಮ್ಮಣ್ಣ ನಾಯಕ ಭೇಟಿ ನೀಡಿ, ತಹಸೀಲ್ದಾರ ಅವರು ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದು, ಶಾಂತಿ ಸುವ್ಯವಸ್ಥೆಗೆ ಸಹಕರಿಸಲು ಮನವಿ ಮಾಡಿದರು.