ಕೊಪ್ಪಳ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಹೆಸರು ಬದಲಾವಣೆ ಮಾಡಿರುವ ಸರ್ಕಾರದ ನಿರ್ಧಾರ ವಿವೇಚನಾ ರಹಿತವಾದದ್ದು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಎಂಬ ಹೆಸರನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿಗೆ ಆ ಹೆಸರನ್ನಿಟ್ಟಿರೋದು ಸಾಂವಿಧಾನಿಕವಾಗಿ ಸರಿಯಲ್ಲ. ಏಕೆಂದರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ 371 ನೇ ಜೆ ಸೌಲಭ್ಯದ ನಿಮಯದಲ್ಲಿ ಹೈದರಾಬಾದ್ ಕರ್ನಾಟಕ ಎಂದಿದ್ದು, ಉದ್ಯೋಗ, ಉನ್ನತ ಶಿಕ್ಷಣದ ಮೀಸಲಾತಿ ಇದೆ. ಈಗ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿದ್ದರಿಂದ ತೊಂದರೆಯಾಗಲಿದೆ ಎಂದರು.
371ನೇ ಜೆ ಕಲಂ ಸೌಲಭ್ಯದ ಬಗ್ಗೆ ಯಾರಾದರೂ ನ್ಯಾಯಾಲದಯಲ್ಲಿ ಪ್ರಶ್ನೆ ಮಾಡಬಹುದು. ಹೆಸರು ಬದಲಾವಣೆ ಮಾಡುವುದಿದ್ದರೆ ಸರ್ಕಾರ ಮೊದಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಿಸಲಿ. ಇಂತಹ ಸೂಕ್ಷ್ಮ ವಿಚಾರಗಳಿಗೆ ವಿವೇಚನೆಬೇಕು. ಬಿಜೆಪಿ ಹಾಗೂ ಪ್ರಸ್ತುತ ರಾಜ್ಯ ಸರ್ಕಾರ ಭಾವನಾತ್ಮಕವಾಗಿ ಹಾಗೂ ವಿವೇಚನಾ ರಹಿತವಾಗಿ ಇಂತಹ ಕೆಲಸ ಮಾಡುತ್ತಿದೆ ಎಂದು ದೂರಿದರು.
ಇನ್ನು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಮೊದಲು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು, ಮತ್ತೀಗ ಕಲ್ಯಾಣ ಕರ್ನಾಟಕ ಉತ್ಸವ ಎಂದು ಆಚರಿಸುವಂತೆ ಆದೇಶ ಮಾಡಿದೆ. ವಿಮೋಚನೆ ಎಂದರೆ ಬಿಡುಗಡೆ, ತೊಲಗು ಎಂದರ್ಥ. ಆದರೆ, ರಾಜ್ಯ ಸರ್ಕಾರ ವಿವೇಚನೆ ಇಲ್ಲದೇ ಹೆಸರು ಬದಲಾವಣೆ ಮಾಡಿದೆ. ಹೆಸರು ಬದಲಾವಣೆಯಿಂದ ಹೈಕ ಭಾಗದ ಜನರಿಗೆ ಸಿಗುತ್ತಿರುವ 371ನೇ ಜೆ ಕಲಂನ ಸೌಲಭ್ಯಗಳನ್ನು ತಪ್ಪಿಸುವ ಉದ್ದೇಶವೂ ಇರಬಹುದು ಎಂದರು.
ಹೈ.ಕ ಭಾಗಕ್ಕೆ ಒಂದೇ ಒಂದು ಮಂತ್ರಿಸ್ಥಾನ ನೀಡಿದ್ದಾರೆ. ಅದು ಪಶು ಇಲಾಖೆ, ಪಶು ಎಂದರೆ ನಮ್ಮ ಆಡುಭಾಷೆಯಲ್ಲಿ ದನ. ದನ ನೋಡಿಕೊಳ್ಳುವ ಖಾತೆಯನ್ನು ಈ ಭಾಗಕ್ಕೆ ನೀಡಿದ್ದಾರೆ. ಡಿಸಿಎಂ ಹುದ್ದೆ ಸಂವಿಧಾನದಲ್ಲಿಲ್ಲ ಆದರೆ, ಆಡಾಳಿತಾತ್ಮಕ ದೃಷ್ಠಿಯಿಂದ ಒಬ್ಬರನ್ನು ಡಿಸಿಎಂ ಮಾಡಬಹುದು. ಡಿಸಿಎಂ ಹುದ್ದೆ ಹೆಚ್ಚು ಹಣ ಖರ್ಚಿಗೆ ಕಾರಣ ಎಂದರು. ಇನ್ನು ಡಿಕೆಶಿ ಬಂಧನದ ಹಿಂದೆ ಹೆಚ್ಚು ರಾಜಕಾರಣವಿದೆ. ಅಭಿಮಾನದಿಂದ ಒಕ್ಕಲಿಗ ಸಮುದಾಯ ಡಿಕೆಶಿ ಪರವಾಗಿ ಪ್ರತಿಭಟನೆ ಮಾಡಿರಬಹುದು ಎಂದು ಬಸವರಾಜ ರಾಯರೆಡ್ಡಿ ಹೇಳಿದರು.