ಕೊಪ್ಪಳ : ಕಡು ಬಡತನದಲ್ಲಿ ಅರಳಿರುವ ಪ್ರತಿಭೆ ಫರೀದಾ ಬೇಗಂ ಎಂಬುವರು ಯುಟ್ಯೂಬ್‌ನಲ್ಲಿ ಪಠ್ಯ ಆಲಿಸುತ್ತಾ, ಹೂಕಟ್ಟುತ್ತಾ, ಮನೆ ಕೆಲಸ ಮಾಡುತ್ತಾ, ಇತ್ತೀಚೆಗೆ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದಾರೆ.
ಹೂಕಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಈ ಕುಟುಂಬದಲ್ಲಿ ಬಡತನದ ಮಧ್ಯೆಯೂ ಛಲಬಿಡದೆ ಪಿಎಸ್ಐ ಆಗಿ ಆಯ್ಕೆಯಾಗುವ ಮೂಲಕ ಬೇಗಂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರಿನ ಬಸ್ ನಿಲ್ದಾಣ ಬಳಿ ಹೂವು ಮಾರುವ ಮೌಲಾಹುಸೇನ ಪಟೇಲ್ ಪುತ್ರಿ ಫರೀದಾ ಈ ಸಾಧನೆಯೊಂದಿಗೆ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ. ಜೊತೆಗೆ ತನ್ನ ತಂಗಿಯೂ ಉನ್ನತ ಹುದ್ದೆಗೇರಲು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಬೇಗಂ ವ್ಯಕ್ತಪಡಿಸಿದ್ದಾರೆ.
ಮೌಲಾಹುಸೇನ ಅವರದು ತುಂಬು ಕುಟುಂಬ. ಇವರಿಗೆ ಒಟ್ಟು 12 ಜನ ಮಕ್ಕಳು. 5 ಜನ ಗಂಡು ಮಕ್ಕಳು, 7 ಜನ ಹೆಣ್ಮಕ್ಕಳಿದ್ದಾರೆ. ಇಡೀ ಕುಟುಂಬ ಹೂ ಕಟ್ಟಿ ಮಾರುವ ಕೆಲಸ ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮವಾಗಿ ಓದಿ ಉನ್ನತ ಹುದ್ದೆಯಲ್ಲಿರಬೇಕೆಂಬ ಆಸೆ ಮೌಲಾಹುಸೇನ ಅವರದಾಗಿತ್ತು. 7 ತಿಂಗಳ ಹಿಂದಷ್ಟೇ ಮೃತಪಟ್ಟಿರುವ ಮೌಲಾಹುಸೇನ ಅವರ ಈ ಆಸೆಯನ್ನು ಇದೀಗ 9ನೇ ಪುತ್ರಿ ಫರೀದಾ ಬೇಗಂ ಪೂರೈಸಿದ್ದಾಳೆ.
ಇದನ್ನೂ ಓದಿ: ಜಾತಿ ಪ್ರಮಾಣ ಪತ್ರ ಕೊಟ್ಟರಷ್ಟೇ ಶಾಲೆಗೆ ಮಕ್ಕಳನ್ನು ಕಳಿಸ್ತೀವಿ : ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಭೋವಿ ಜನಾಂಗ
ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಓದಿರುವ ಫರೀದಾ ಅವರಿಗೆ ಐಎಎಸ್ ಮಾಡಬೇಕೆಂಬ ಆಸೆ. ಇದೇ ಕಾರಣಕ್ಕೆ ಪದವಿ ಮುಗಿಸಿದ ನಂತರ ಹೈದ್ರಾಬಾದ್‌ನಲ್ಲಿ ಐಎಎಸ್‌ಗೆ ತರಬೇತಿ ಪಡೆದು ಪರೀಕ್ಷೆ ಬರೆದಿದ್ದಾರೆ. ಸ್ವಲ್ಪ ಅಂಕಗಳ ಅಂತರದಲ್ಲಿ ಫರೀದಾ ಐಎಎಸ್ ಪರೀಕ್ಷೆ ಪಾಸಾಗಲು ಆಗಿರಲಿಲ್ಲ. ಐಎಎಸ್‌ಗೆ ಓದನ್ನು ಮುಂದುವರಿಸುತ್ತಲೇ, ಇತ್ತೀಚಿಗೆ ಕೆಎಎಸ್ ಪರೀಕ್ಷೆ ಬರೆದು ಪ್ರಿಲಿಮಿನರ್‌ನಲ್ಲಿ ಪಾಸಾಗಿದ್ದಾರೆ. ಇಷ್ಟರಲ್ಲಿಯೇ ಮುಖ್ಯ ಪರೀಕ್ಷೆ ಎದುರಿಸಲಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ 520 ಪಿಎಸ್ಐಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಫರೀದಾ ಬೇಗಂ ಕಲ್ಯಾಣ ಕರ್ನಾಟಕ ಭಾಗದಲ್ಲಿ 17ನೇ ರ್ಯಾಂಕ್ ಪಡೆದು ತನ್ನ ಕುಟುಂಬಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ