ಕೊಪ್ಪಳ: ಮತ ಪತ್ರದಲ್ಲಿದ್ದ ಎರಡು ಚಿಹ್ನೆಗಳ ಮಧ್ಯದಲ್ಲಿ ಮತದಾರನೊಬ್ಬ ಹಕ್ಕು ಚಲಾಯಿಸಿದ್ದರಿಂದ ಮತ ಎಣಿಕೆ ಸಂದರ್ಭದಲ್ಲಿ ಮತವನ್ನು ಸ್ಕೇಲ್ನಿಂದ ಅಳೆದು ನಿರ್ಧರಿಸಿದ ಕುತೂಹಲಕಾರಿ ಘಟನೆ ನಗರದ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ನ ಎಣಿಕೆ ಕೇಂದ್ರದಲ್ಲಿ ನಡೆಯಿತು.
ತಾಲೂಕಿನ ಗೊಂಡಬಾಳ ಗ್ರಾ.ಪಂಚಾಯತ್ನ ಮುದ್ದಾಬಳ್ಳಿ ಗ್ರಾಮದ ಒಂದನೇ ವಾರ್ಡ್ನ ಮತ ಎಣಿಕೆಯ ವೇಳೆ ಟಿವಿ ಚಿಹ್ನೆಯ ಗಾಳೆಪ್ಪ ಪೂಜಾರ್ ಹಾಗೂ ಆಟೋ ಚಿಹ್ನೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದ.
ಇದ್ರಿಂದ ಸಹಜವಾಗಿಯೇ ಆತ ಯಾರಿಗೆ ಮತ ಚಲಾಯಿಸಿದ್ದಾನೆ? ಎಂಬುದನ್ನು ತಿಳಿಯುವಲ್ಲಿ ಗೊಂದಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಮತ ಪತ್ರವನ್ನು ಕೆಲಕಾಲ ಎಣಿಕೆ ಕಾರ್ಯದಿಂದ ಹೊರಗಿಡಲಾಯಿತು.
ಕೊನೆಯ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತವನ್ನು ಚುನಾವಣಾಧಿಕಾರಿ ಸ್ಕೇಲ್ನಿಂದ ಅಳತೆ ಮಾಡಿ ಟಿವಿ ಚಿಹ್ನೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಿಸಿದರು.