ಕುಷ್ಟಗಿ (ಕೊಪ್ಪಳ): ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಕಮುನಿ ಆರಾಧನಾ ಮಹೋತ್ಸವದ ಅಡ್ಡಪಲ್ಲಕ್ಕಿ ಪ್ರದಕ್ಷಿಣೆಯ ಸರಳ ಆಚರಣೆ ಧಿಕ್ಕರಿಸಿ ದೇವಸ್ಥಾನದ ಶಟರ್ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಕೊರೊನಾ ಹಿನ್ನೆಲೆ ಆರಾಧನಾ ಮಹೋತ್ಸವವನ್ನು ನಿಷೇಧಿಸಲಾಗಿತ್ತು. ಅದರೆ, ಸಂಪ್ರದಾಯನ್ನು ಕೈಬಿಡಬಾರದು ಎನ್ನುವ ಕಾರಣದಿಂದ ಸರಳವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಅಡ್ಡಪಲ್ಲಕ್ಕಿ ವೇಳೆ ಉನ್ಮತ್ತ ಭಕ್ತರು ಕಬ್ಬಿಣದ ಶಟರ್ ಪುಡಿಗಟ್ಟಿ ಗೊಂದಲದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಈ ವೇಳೆ ಕೆಲವರು ದಾಂಧಲೆ ನಡೆಸಿದ್ದರಿಂದ ಪರಿಸ್ಥಿತಿ ಅರಿತ ತಹಶೀಲ್ದಾರ್ ಎಂ.ಸಿದ್ದೇಶ ಹಾಗೂ ಸಿಪಿಐ ಚಂದ್ರಶೇಖರ ಜಿ. ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಅಡ್ಡಪಲ್ಲಕ್ಕಿ ವಶಕ್ಕೆ ತೆಗೆದುಕೊಳ್ಳಲು ಬಂದಾಗ ಅಡ್ಡಪಲ್ಲಕ್ಕಿಯನ್ನು ಸಿಪಿಐ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ.
ಈ ಸಂದರ್ಭದಲ್ಲಿ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದಾಗ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ.