ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಮುಂದೆ ಫುಟ್ಪಾತ್ ನಿರ್ಮಾಣದ ಕಾಮಗಾರಿ ಹಿನ್ನೆಲೆ ಆವರಣಕ್ಕೆ ಹೊಂದಿಕೊಂಡಿದ್ದ ಅನಧಿಕೃತ ಗೂಡಂಗಡಿಗಳನ್ನು ಪುರಸಭೆ ತೆರವುಗೊಳಿಸಿ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.
ಕಳೆದ 1994-95ನೇ ಸಾಲಿನಲ್ಲಿ 10 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಮಂಜೂರಾಗಿದ್ದ ಫುಟ್ಪಾತ್ ನಿರ್ಮಾಣ ಕಾಮಗಾರಿಗೆ ಅನಧಿಕೃತ ಗೂಡಂಗಡಿಗಳು ಅಡ್ಡಿಯಾಗಿದ್ದವು. ತೆರವಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಹಾಗೂ ಬಿಡುಗಡೆಯಾದ ಅನುದಾನ ವಾಪಸಾಗುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಆವರಣ ಗೋಡೆಯನ್ನು ಬಿಡಿಸಿದ್ದರು.
ಆದಾಗ್ಯೂ ತಾತ್ಕಾಲಿಕವಾಗಿ ಗೂಡಂಗಡಿ ಹಾಕಿಕೊಂಡಿದ್ದವರಿಗೆ ಪುರಸಭೆ ಕಾರ್ಮಿಕರು, ಜೆಸಿಬಿ ಯಂತ್ರ ಸಹಿತ ಬಂದು ಶಾಕ್ ನೀಡಿದರು. ಪೌರಕಾರ್ಮಿಕರು ಕಾಮಗಾರಿ ಸ್ಥಳದಿಂದ ಗೂಡಂಗಡಿಗಳನ್ನು ತೆರವುಗೊಳಿಸುತ್ತಿದ್ದಂತೆ ಅಂಗಡಿಕಾರರು ಪ್ರತಿರೋಧ ವ್ಯಕ್ತಪಡಿಸದೆ ತೆರವಿಗೆ ಮುಂದಾದರು.
ಈ ಕುರಿತು ಪುರಸಭೆ ಜೆಇ ಚಿಂದಾನಂದ ಪ್ರತಿಕ್ರಿಯಿಸಿ, ಕಳೆದ 5 ವರ್ಷಗಳ ಹಿಂದೆ ಕಾಮಗಾರಿ ನನೆಗುದಿ ಬಿದ್ದಿತ್ತು. ಇಲ್ಲಿ ಫುಟ್ಪಾತ್, ಗ್ರಿಲ್ ಹಾಗೂ ಆಸನದ ವ್ಯವಸ್ಥೆ ಮಾಡಲಾಗುವುದು ಎಂದರು.