ಗಂಗಾವತಿ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತೊಳಹುಣಸಿಯ ಕಣ್ವಮಠದ ಪೀಠಾಧಿಪತಿ ವಿದ್ಯಾವಾರಧಿ ತೀರ್ಥ ಸ್ವಾಮೀಜಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಆಡಿಯೋ ಸಂಭಾಷಣೆ ಬಹಿರಂಗವಾಗುತ್ತಿದ್ದಂತೆಯೆ ಭಕ್ತರಲ್ಲಿನ ಆಕ್ರೋಶ ಸ್ಫೋಟಗೊಳ್ಳುತ್ತಿದೆ.
ಗಂಗಾವತಿಯಲ್ಲಿ ಕಣ್ವಮಠದ ಭಕ್ತರು ಸ್ವಾಮೀಜಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಪೀಠತ್ಯಾಗ ಮಾಡಬೇಕು. ಪೀಠದಲ್ಲಿ ಮುಂದುವರೆಯಬಾರದು ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಕಣ್ವಮಠದ ಹಾಗೂ ಗಂಗಾವತಿ ಯಜ್ಞವಲ್ಕ್ಯ ದೇಗುಲದ ಕಾರ್ಯದರ್ಶಿ ಗುರುರಾಜ ಚಿರ್ಚನಗುಡ್ಡ ಮಾತನಾಡಿ, ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಸ್ವಾಮೀಜಿ ವಾದ ಮಾಡುತ್ತಿದ್ದಾರೆ, ಆದ್ರೆ ಇದು ಶುದ್ಧ ಸುಳ್ಳು. ಸ್ವಾಮೀಜಿ ನಡತೆ ಮೊದಲಿನಿಂದಲೂ ಹೀಗೇ ಇದೆ. ಪೀಠಕ್ಕೇರಿದ ಬಳಿಕವೂ ಅವರ ನಡತೆಯಲ್ಲಿ ಬದಲಾವಣೆಯಾಗಿಲ್ಲ. ಈಗ ಕೇಳಿಬಂದಿರುವ ಆರೋಪದಿಂದ ಕಾನೂನು ಬದ್ಧವಾಗಿ ಹೊರಬನ್ನಿ ಎಂದು ಹೇಳಿದರು.
ಕಣ್ವಮಠದ ಸ್ವಾಮೀಜಿ ಪ್ರಕರಣ: ತುರ್ತು ಸಭೆ ಕರೆದ ಬ್ರಾಹ್ಮಣ ಸಮಾಜ
ಕಣ್ವಮಠದ ವಿದ್ಯಾವಾರಧಿ ತೀರ್ಥ ಸ್ವಾಮೀಜಿಯ ಆಶ್ಲೀಲ ವಿಡಿಯೋ, ಆಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬ್ರಾಹ್ಮಣ ಸಮಾಜದ ಕಣ್ವಮಠದ ಅನುಯಾಯಿಗಳು ನಗರದಲ್ಲಿ ತುರ್ತುಸಭೆ ಕರೆದಿದ್ದಾರೆ.
ಇಲ್ಲಿನ ಯಜ್ಞವಲ್ಕ್ಯ ದೇಗುಲದಲ್ಲಿ ಅಧ್ಯಕ್ಷ ರಾಘವೇಂದ್ರರಾವ್ ನೇತೃತ್ವದಲ್ಲಿ ಸಂಜೆ ಸಭೆ ನಡೆದಿದೆ. ಸ್ವಾಮೀಜಿಯ ಪ್ರಕರಣ, ಇಡೀ ಸಮುದಾಯ ಮುಂದೇನು ನಿರ್ಧಾರ ಕೈಗೊಳ್ಳಬೇಕು?, ಸ್ವಾಮೀಜಿ ಪೀಠದಲ್ಲಿ ಮುಂದುವರೆಯಬೇಕೋ, ಬೇಡವೋ ಎಂಬ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.