ಗಂಗಾವತಿ: ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಸೋಂಕಿತನೊಂದಿಗೆ ಆಗಮಿಸಿದ್ದ ಪ್ರಯಾಣಿಕರ ಪೈಕಿ ನಾಪತ್ತೆಯಾಗಿದ್ದ 60 ವರ್ಷದ ವೃದ್ಧೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ ಕೊನೆಗೂ ಪತ್ತೆ ಮಾಡಿದ್ದಾರೆ.

ನಾಪತ್ತೆಯಾಗಿದ್ದ ವೃದ್ಧೆಯನ್ನು ಗುರುತಿಸುವ ಸಂಬಂಧ ಆರೋಗ್ಯ, ಕಂದಾಯ ಹಾಗೂ ನಗರಸಭೆ ಸಿಬ್ಬಂದಿ ಎರಡು ದಿಗಳಿಂದ ಅವಿರತ ಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹರಿಯಬಿಟ್ಟು ಸಾರ್ವಜನಿಕರ ಸಹಕಾರ ಕೋರಲಾಗಿತ್ತು. ಆದರೆ, ತಹಶೀಲ್ದಾರ್ ಚಂದ್ರಕಾಂತ್ ಮತ್ತು ಕಂದಾಯ ನಿರೀಕ್ಷಕ ಮಂಜುನಾಥ ವಿಶೇಷ ಆಸಕ್ತಿ ವಹಿಸಿದ ಪರಿಣಾಮ ವೃದ್ಧೆ ಹುಲಿಗೆಮ್ಮ ಅವರನ್ನು ಪತ್ತೆ ಮಾಡಲಾಗಿದೆ.
ಮಾಸಾಶನ ಪಡೆಯುತ್ತಿರುವ ಪಟ್ಟಿಯಲ್ಲಿ ಮೊದಲಿಗೆ ವೃದ್ಧೆಯ ಹೆಸರನ್ನು ಪತ್ತೆ ಮಾಡಲಾಗಿದೆ. ತಾಲೂಕಿನಲ್ಲಿ ಎಷ್ಟು ಜನ ಇದ್ದಾರೆ ಎಂದು ಗುರುತಿಸಿ ಬಳಿಕ ನಗರದಲ್ಲಿ ಪತ್ತೆಯಾದ ಇಬ್ಬರನ್ನು ಪ್ರತ್ಯೇಕಿಸಿದ್ದಾರೆ. ಆಧಾರ್ ಕಾರ್ಡ್ ಮೂಲಕ ನಾಪತ್ತೆಯಾಗಿದ್ದ ವೃದ್ಧೆಯನ್ನು ಪತ್ತೆ ಹಚ್ಚಿದ ಕಂದಾಯ ಸಿಬ್ಬಂದಿಯ ನೆರವಿನಿಂದ ಆಕೆಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.