ಗಂಗಾವತಿ: ಕಲುಷಿತ ಆಹಾರ ಸೇವಿಸಿದ ಪರಿಣಾಮ ಫುಡ್ ಪಾಯಿಸನ್ ಉಂಟಾಗಿ ಹನ್ನೆರಡಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕನಕಗಿರಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸಂಭವಿಸಿದೆ.
ಅಸ್ವಸ್ಥ ವಿದ್ಯಾರ್ಥಿನಿಯರನ್ನು ಪಟ್ಟಣದ ನಾನಾ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಿಕಾ, ಪಾರ್ವತಿ, ಹನುಮಂತಿ, ಅಶ್ವಿನಿ, ಶ್ರಾವಣಿ, ಲತಾ, ದೀಪಾ ಲಕ್ಷ್ಮಣ, ದೀಪಾ ಶರಣಪ್ಪ, ಸವಿತಾ, ಲತಾ ಹಾಗೂ ಪವಿತ್ರ ಎಂದು ಗುರುತಿಸಲಾಗಿದೆ.
ಎಸ್ಸಿ ಕಾಲೋನಿಯಲ್ಲಿರುವ ವಸತಿ ನಿಲಯದಲ್ಲಿ ಬೆಳಗ್ಗೆ ಆಹಾರ ಸೇವಿಸಿದ ಕೂಡಲೇ ಕೆಲ ಮಕ್ಕಳಲ್ಲಿ ವಾಕಾರಿಕೆ ಆರಂಭವಾಗಿ ವಾಂತಿ- ಭೇದಿ ಆಗಿದೆ. ಇದನ್ನು ಕಂಡು ಇನ್ನು ಕೆಲ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯಕ್ಕೆ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಿದಾನಂದ, ವಾರ್ಡನ್ ತುಗ್ಲೆಪ್ಪ ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಹಲವು ದಿನಗಳಿಂದ ವಸತಿ ನಿಲಯದಲ್ಲಿ ನೀಡುತ್ತಿರುವ ಆಹಾರದಲ್ಲಿ ಸ್ವಚ್ಛತೆ ಕೊರತೆ ಮತ್ತು ಅಶುದ್ಧವಾದ ಆಹಾರ ನೀಡಲಾಗುತ್ತಿದೆ ಎನ್ನಲಾಗಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂಬ ದೂರು ಕೇಳಿ ಬಂದಿವೆ.
ಓದಿ: ಹೆಸರು ಬೇಳೆ, ಐಸ್ ಕ್ರೀಂ ತಿಂದು ಫುಡ್ ಪಾಯ್ಸನ್: ಮಂಗಳೂರಿನಲ್ಲಿ ನಾಲ್ವರು ಆಸ್ಪತ್ರೆಗೆ ದಾಖಲು