ಕೊಪ್ಪಳ: ಮಾರ್ಚ್.08ರಂದು ಸಿಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಬಗ್ಗೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ಕುಂಟುತ್ತಾ, ತೆವಳುತ್ತಾ ಸಾಗಿರುವ ಹಾಗೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಪ್ರಾಶಸ್ತ್ಯ ಸಿಗಲಿದೆಯೇ ಎಂಬ ಆಸೆಯನ್ನು ಹೊಂದಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಗಳಿದ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯ ಜನತೆ ಪ್ರತಿವರ್ಷವೂ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ, ಈವರೆಗೆ ಜಿಲ್ಲೆಗೆ ಕೆಲವೊಂದಿಷ್ಟು ಸೌಲಭ್ಯಗಳು ಬಿಟ್ಟರೆ ಹೇಳಿಕೊಳ್ಳುವಂತಹ ಅಂತಹ ಮಹತ್ವದ ಯೋಜನೆಗಳು ಬಂದಿಲ್ಲ. ಆದರೂ ಈ ಬಾರಿಯ ಬಜೆಟ್ನಲ್ಲಿ ಸೌಲಭ್ಯಗಳು ಸಿಗಲಿವೆಯೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಜಿಲ್ಲೆಯ ಜನರ ಪ್ರಮುಖ ಬೇಡಿಕೆಗಳಿವು:
ನೀರಾವರಿ ಯೋಜನೆಗಳಿಗೆ ಪ್ರಾಶಸ್ತ್ಯ
ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊಪ್ಪಳ ಹಾಗೂ ಕುಕನೂರು ತಾಲೂಕಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಆದರೆ ಯೋಜನೆ ಕುಂಟುತ್ತಾ ತೆವಳುತ್ತಾ ಸಾಗಿದೆ. ಈ ಯೋಜನೆ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಕನಕಗಿರಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶಿತ ಕೃಷ್ಣ ಬಿ ಸ್ಕೀಂ ಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ತುಂಗಭದ್ರಾ ಜಲಾಶಯದ ಹೂಳು ತೆಗೆಯುವುದು:
ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿಗೂ ಅಧಿಕ ಹೂಳು ತುಂಬಿಕೊಂಡಿದೆ. ಈ ಹೂಳು ತೆಗೆಯಬೇಕೆಂಬ ಆಗ್ರಹವಿದೆ. ಆದರೂ ಅದು ಸುಲಭದ ಮಾತಲ್ಲ. ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಬಲವಾಗಿದೆ. ಈ ಹಿನ್ನೆಲೆಯಲ್ಲಿ ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತ ಜಲಾಶಯ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲು ಕಳೆದ ಬಾರಿ ಬಜೆಟ್ನಲ್ಲಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ನವಲಿ ಜಲಾಶಯ ನಿರ್ಮಾಣ ಮಾಡಲು ಬಜೆಟ್ನಲ್ಲಿ ಅನುದಾನ ಮೀಸಲಿರಿಸಿ ಘೋಷಣೆ ಮಾಡಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
ಓದಿ: ಡ್ರಗ್ಸ್ ಪ್ರಕರಣ: ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮನೆ ಮೇಲೆ ಪೊಲೀಸರ ದಾಳಿ
ಹಿರೇಹಳ್ಳ ಜಲಾಶಯವನ್ನು ಒಂದು ಮೀಟರ್ ಎತ್ತರಿಸುವುದು:
ಇನ್ನು ಹಿರೇಹಳ್ಳ ಜಲಾಶಯವನ್ನು ಒಂದು ಮೀಟರ್ ಎತ್ತರಿಸುವುದು ಹಾಗೂ ನನೆಗುದಿಗೆ ಬಿದ್ದಿರುವ ಇನ್ನಿತರ ಏತ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ನೆರವು ಸಿಗಬೇಕಿದೆ. ಇನ್ನುಳಿದಂತೆ ಉಡಾನ್ ಯೋಜನೆ ಘೋಷಣೆಯಾಗಿದ್ದರೂ ಸಹ ಇನ್ನೂ ವಿಮಾನ ಹಾರಾಟ ನಡೆದಿಲ್ಲ. ಅದಕ್ಕಾಗಿ ಬೇಕಾಗಿರುವ ವಿಮಾನ ನಿಲ್ದಾಣ ನಿರ್ಮಾಣ, ಟಾಯ್ ಕ್ಲಸ್ಟರ್ ಭೂಮಿ ಪೂಜೆಗೆ ಸಿಎಂ ಯಡಿಯೂರಪ್ಪ ಬಂದಿದ್ದ ಸಂದರ್ಭದಲ್ಲಿ ಹೇಳಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆ, ಸ್ನಾತಕೋತ್ತರ ಕೇಂದ್ರದ ಕಟ್ಟಡಕ್ಕೆ ಅನುದಾನ, ಪ್ರವಾಸೋದ್ಯಮಗಳ ಅಭಿವೃದ್ಧಿ, ಜಿಂಕೆ ವನ ಸ್ಥಾಪನೆ ಸೇರಿದಂತೆ ಇನ್ನಿತರ ಮಹತ್ವದ ಯೋಜನೆಗಳು ಈ ಬಾರಿ ಜಿಲ್ಲೆಗೆ ಘೋಷಣೆಯಾಗುತ್ತವೆಯಾ ಎಂಬ ನಿರೀಕ್ಷೆಯನ್ನು ಜಿಲ್ಲೆಯ ಜನರು ಹೊಂದಿದ್ದಾರೆ. ಬೆಟ್ಟದಷ್ಟು ನಿರೀಕ್ಷೆಗಳಲ್ಲಿ ಮುಷ್ಠಿಯಷ್ಟಾದರೂ ಈಡೇರುತ್ತವೆಯಾ ಎಂಬುದನ್ನು ಕಾದು ನೋಡಬೇಕಿದೆ.