ಕುಷ್ಟಗಿ: ಕೊರೊನಾದಿಂದಾಗಿ 11 ತಿಂಗಳ ಸ್ಥಗಿತಗೊಂಡಿದ್ದ ಶಾಲಾ ಚಟುವಟಿಕೆಗಳಿಗೆ ಜೀವ ಕಳೆ ಬಂದಿದೆ. ಸೋಮವಾರದಿಂದ 6ರಿಂದ 8ನೇ ತರಗತಿ ಶಾಲಾರಂಭದ ಹಿನ್ನೆಲೆ ಮಕ್ಕಳು, ಪಾಲಕರು ಹಾಗೂ ಶಿಕ್ಷಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.
ವಠಾರ ಶಾಲೆ, ವಿದ್ಯಾಗಮ ಎರಡು ಹಂತಗಳ ಬಳಿಕ ಇದೀಗ ಶಾಲಾ ಚಟುವಟಿಕೆಗಳು ಆರಂಭವಾಗಿದ್ದು, ಶಾಲೆಗಳಲ್ಲಿ ಮಕ್ಕಳು ಉತ್ಸಾಹದಿಂದ ಕಲಿಯುತ್ತಿದ್ದಾರೆ. ತಾಲೂಕಿನ 137 ಸರ್ಕಾರಿ ಶಾಲೆಗಳು, 6 ಅನುದಾನಿತ ಹಾಗೂ 17 ಅನುದಾನ ರಹಿತ ಶಾಲೆಗಳಲ್ಲಿ ಸೋಮವಾರ ಆರಂಭಿಕ ದಿನವೇ ಸರಾಸರಿ ಹಾಜರಾತಿ ಶೇ.79 ರಷ್ಟಿತ್ತು. ಒಟ್ಟು 21,661 ಮಕ್ಕಳಲ್ಲಿ 17,167 ಮಕ್ಕಳು ಹಾಜರಾಗಿದ್ದರು ಎನ್ನುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿ.
ವಿದ್ಯಾರ್ಥಿನಿ ಅಮೃತಾ ಪ್ರತಿಕ್ರಿಯಿಸಿ, ವಠಾರ ಶಾಲೆ, ವಿದ್ಯಾಗಮ ಇತ್ಯಾಧಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಸಂಧರ್ಭದಲ್ಲಿ ಶಾಲೆಯ ಹೊರಗೆ ಬಯಲು ಪ್ರದೇಶದಲ್ಲಿ ಪಾಠಗಳು ನಡೆಯುತ್ತಿದ್ದರಿಂದ ಏಕಾಗ್ರತೆಗೆ ಅಡ್ಡಿಯಾಗುತ್ತಿತ್ತು. ಈ ಶಾಲೆ ಆರಂಭವಾಗಿದ್ದರಿಂದ ಕಲಿಯಲು ಸುಲಭವಾಗಿದೆ ಎಂದಿದ್ದಾಳೆ.