ಗಂಗಾವತಿ: ಕಾಂಗ್ರೆಸ್ ಪಕ್ಷ ಎಂದರೆ ಡಬಲ್ ಎಸ್. ಅಂದರೆ ಒಂದು ಸಿದ್ದರಾಮಯ್ಯ ಮತ್ತೊಂದು ಡಿ. ಕೆ ಶಿವಕುಮಾರ ಎಂದರ್ಥ ರಾಜ್ಯದಲ್ಲಿ ಉಂಟಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಕುರಿತಂತೆ ವ್ಯಂಗ್ಯವಾಡಿದರು.
ತಾಲೂಕಿನ ಪಂಪಾಸರೋವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಒಳಗೆ ಬಿಕ್ಕಟ್ಟು, ಹೊರಗೆ ಮಾತ್ರ ಒಕ್ಕಟ್ಟುನಂತಹ ಸ್ಥಿತಿ ಇದೆ. ಇದು ಪಕ್ಷದಲ್ಲಿನ ಉಸಿರುಕಟ್ಟಿದ ವಾತಾವರಣದಂತಾಗಿದೆ ಎಂದು ಶ್ರೀರಾಮುಲು ಹೇಳಿದರು.
ಸಿ ಎಂ. ಇಬ್ರಾಹಿಂ ಅವರಂತಹ ಸಾತ್ವಿಕ ನಾಯಕರ ಬಗ್ಗೆ ನಮಗೆ ಅನುಕಂಪವಿದೆ. ಅಂತಹ ನಾಯಕರನ್ನು ಕಾಂಗ್ರೆಸ್ ಹೊರಕ್ಕೆ ಹಾಕಿದೆ. ಇದು ನೋವಿನ ವಿಚಾರ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರ ಕೊರತೆ ಇದೆ. ಎಸ್.ಆರ್ ಪಾಟೀಲ್ ಅವರಂತಹ ನಾಯಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ಇಲ್ಲದಿರುವುದು ಖೇದಕರ ಎಂದರು.
ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯಲ್ಲಿಯೇ ಪುರಾತನ ದೇಗುಲಗಳನ್ನು ಜಿರ್ಣೋದ್ಧಾರ ಮಾಡಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ. ವಿಜಯನಗರ ಭಾಗದಲ್ಲಿನ ದೇಗುಲಗಳ ಅಭಿವೃದ್ಧಿಗೆ ನಮ್ಮದೇ ಆದ ಕೆಲ ಕನಸುಗಳಿವೆ ಎಂದು ತಿಳಿಸಿದರು.
ಕೋವಿಡ್ ರೀತಿಯ ಸಾಂಕ್ರಾಮಿಕತೆ ಉಂಟಾಗದಿದ್ದರೆ, ಇಷ್ಟು ಹೊತ್ತಿಗಾಗಲೇ ಈ ಭಾಗ ಅಭಿವೃದ್ಧಿಯಾಗುತ್ತ ಇತ್ತು. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕೋ, ಬೇಡವೋ ಎಂಬುದು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಶ್ರೀರಾಮುಲು ಹೇಳಿದರು.