ಕೊಪ್ಪಳ: ಚುನಾವಣೆಯ ಸಂದರ್ಭದಲ್ಲಿ ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುವುದಾಗಿ ಬಿಜೆಪಿ ಹೇಳಿತ್ತು, ಆದರೆ ಬಿಜೆಪಿ ಸರ್ಕಾರ ಬಂದಮೇಲೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡದೆ ಇರುವುದಕ್ಕೆ ನಾನು ಯಡಿಯೂರಪ್ಪರವರ ನಡೆಯನ್ನು ಖಂಡಿಸುತ್ತೇನೆ ಎಂದು ವಾಲ್ಮೀಕಿ ನಾಯಕ ಗುರು ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಾಲ್ಮೀಕಿ ಸಮಾಜವನ್ನು ಓಟ್ ಬ್ಯಾಂಕ್ ಮಾಡಿಕೊಂಡಿದೆ. ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡುವುದಾಗಿ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರು ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನ ಕೊಡಲಿಲ್ಲ. ಇದರಿಂದ ನಾನು ಅಂದೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಯಡಿಯೂರಪ್ಪ ನಡೆಯನ್ನು ಖಂಡಿಸಿದ್ದೇನೆ ಎಂದರು.
ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಕಟ್ಕೊಂಡು ನನಗೇನಾಗಬೇಕಿದೆ, ನನಗೆ ನನ್ನ ವಾಲ್ಮೀಕಿ ಸಮುದಾಯ ಹಾಗೂ ಸಮುದಾಯದ ಜನರೇ ಮುಖ್ಯ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಡಿಸಿಎಂ ಸ್ಥಾನವನ್ನು ನಮ್ಮ ವಾಲ್ಮೀಕಿ ನಾಯಕ ಸಮುದಾಯಕ್ಕೆ ಕೊಡಬೇಕು. ಇದೀಗ ಡಿಸಿಎಂ ಸ್ಥಾನಕ್ಕೆ ರಮೇಶ ಜಾರಕಿಹೊಳಿ ಹಾಗೂ ಶ್ರೀರಾಮುಲು ಇಬ್ಬರು ಆಕಾಂಕ್ಷಿಗಳಾಗಿದ್ದು ಈ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಸಂತೋಷ. ಇಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆದವರು. ರಾಮ, ಸೀತೆ, ಲಕ್ಷ್ಮಣ, ಹನುಮಂತನನ್ನು ರಾಮಾಯಣದ ಮೂಲಕ ಪರಿಚಯಿಸಿದವರು. ಹೀಗಾಗಿ, ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆಗೆ ಮಹರ್ಷಿ ವಾಲ್ಮೀಕಿ ಅವರ ಮಂದಿರವನ್ನು ಸಹ ನಿರ್ಮಾಣ ಮಾಡಬೇಕೆಂದು ಈ ವೇಳೆ ಆಗ್ರಹಿಸಿದರು. ಅಲ್ಲದೇ, ಹಂಪಿ ಕನ್ನಡ ವಿ.ವಿ ಗೆ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಸರ್ಕಾರ ಮುಂದೆ ಪ್ರಾರಂಭಿಸುವ ಕ್ಯಾಂಟಿನ್‌ಗಳಿಗೆ ಇಂದಿರಾ ಹೆಸರಿನ ಬದಲಾಗಿ ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರನ್ನಿಡುವ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಸ್ವಾಮೀಜಿ ಇದೇ ಸಂದರ್ಭದಲ್ಲಿ ಹೇಳಿದರು.