ಕೊಪ್ಪಳ : ನಿಸರ್ಗ ಅತ್ಯಂತ ಅದ್ಭುತವಾದದ್ದಾಗಿದೆ. ನಿಸರ್ಗದಿಂದ ಯಾವುದೇ ಮೋಸವಾಗುವುದಿಲ್ಲ. ಹುಲ್ಲು ತಿಂದ ಹಸು ಹಾಲು ಕೊಡುತ್ತದೆ. ಆದರೆ, ಹಾಲು ಕುಡಿದ ಮನುಷ್ಯ ವಿಷ ಬಿತ್ತುತ್ತಾನೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದರು.
ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದು ದಾಖಲೆ; ಜೋಕೊವಿಕ್ ಮುಡಿಗೆ 18ನೇ ಗ್ರ್ಯಾಂಡ್ಸ್ಲ್ಯಾಮ್
ತಾಲೂಕಿನ ಗಿಣಗೇರಿ ಗ್ರಾಮದ ಕೆರೆಯಂಗಳದಲ್ಲಿ ನಡೆದ ಕೆರೆ ಅಭಿವೃದ್ಧಿ, ಪುನಶ್ಚೇತನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಈ ನಿಸರ್ಗ ಪಂಚ ಭೂತಗಳಿಂದಾಗಿದೆ. ಇವುಗಳಲ್ಲಿ ಒಂದು ಕೆಟ್ಟರೆ ಇಡೀ ಮನುಷ್ಯನ ಬದುಕಿಗೆ ಕೇಡುಂಟಾಗುತ್ತದೆ. ಹೀಗಾಗಿ, ನಿಸರ್ಗ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕರೆ ನೀಡಿದರು.
ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಬರೀ ಬೇಡುವುದನ್ನು ಮಾಡಬಾರದು. ನಿಸರ್ಗಕ್ಕೆ, ದೇಶಕ್ಕೆ, ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು. ದೇವರ ಮುಂದೆ ಎಲ್ಲರೂ ಭಿಕ್ಷುಕರೆ ಎಂದು ಮಾರ್ಮಿಕವಾಗಿ ನುಡಿದರು.
ನಿಸರ್ಗದಲ್ಲಿ ಎಂತಹ ಅದ್ಭುತವಿದೆ. ತಿಪ್ಪೆಯಲ್ಲಿ ಸುಗಂಧಿತ ಹೂವು ಅರಳುತ್ತದೆ. ಹೀಗಾಗಿ, ನಿಸರ್ಗದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇತಿಹಾಸವನ್ನು ನೋಡಿದಾಗ ಸಂಸ್ಕೃತಿ, ನಾಗರಿಕತೆ ವಿಕಾಸವಾದದ್ದು ನೀರು ಇದ್ದ ಸ್ಥಳಗಳಲ್ಲಿಯೇ.. ನೀರು ಇದ್ದರೆ ಬದಲಾವಣೆ ಸಾಧ್ಯ. ಹೀಗಾಗಿ, ನೀರಿನ ಮೂಲಗಳಾದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳನ್ನು ರಕ್ಷಿಸಿಕೊಳ್ಳಬೇಕು. ಗಿಣಿಗೇರಾ ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭಗೊಂಡಿದೆ ಎಂದರು.
ಜಾತಿ, ಧರ್ಮ, ಪಕ್ಷ, ಬೇಧ ಮರೆತು ಪ್ರತಿಯೊಬ್ಬರು ಇಲ್ಲಿ ಕೆಲಸ ಮಾಡಬೇಕು. ಗಿಣಿಗೇರಿ ಕೆರೆ ಅಭಿವೃದ್ದಿಯಾದರೆ ಇದು ಕೊಪ್ಪಳದ ರಂಗನತಿಟ್ಟು ಆಗಲಿದೆ. ದುಶ್ಚಟಗಳಿಗೆ ಖರ್ಚು ಮಾಡುವ ಹಣವನ್ನು ಇಂತಹ ಒಳ್ಳೆಯ ಕೆಲಸಕ್ಕೆ ನೀಡಿ ಎಂದು ಶ್ರೀಗಳು ಕರೆ ನೀಡಿದರು.