ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದಲ್ಲಿ ಟೈಲರ್ ಕೆಲಸ ನಿರ್ವಹಿಸುವ ಉಮೇಶ ಚಟ್ಟೇರ್ ಹಾಗೂ ಅಂಗನವಾಡಿ ಕಾರ್ಯಕರ್ತೆ ಭಾರತಿ ಚಟ್ಟೇರ್ ದಂಪತಿಯ ಪುತ್ರ ಮಲ್ಲಿಕಾರ್ಜುನ ಚಟ್ಟೇರ್ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 94.08 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಕುಷ್ಟಗಿಯ ಕ್ರೈಸ್ತ ದಿ ಕಿಂಗ್ ಶಾಲೆಯ ವಿದ್ಯಾರ್ಥಿ ಮಲ್ಲಿಕಾರ್ಜುನ ಚಟ್ಟೇರ್ ಕನ್ನಡ ವಿಷಯದಲ್ಲಿ 115, ಇಂಗ್ಲೀಷ್-98, ಹಿಂದಿ-93, ಗಣಿತ-96, ವಿಜ್ಞಾನ-90, ಸಮಾಜ ವಿಜ್ಞಾನದಲ್ಲಿ 96 ಅಂಕಗಳೊಂದಿಗೆ ಒಟ್ಟು 588 ಅಂಕಗಳನ್ನು ಪಡೆದಿದ್ದಾರೆ. ಆದ್ರೂ ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲ. ಈ ಅಂಕಗಳು ತೃಪ್ತಿ ನೀಡಿಲ್ಲ. ಮರು ಮೌಲ್ಯ ಮಾಪನದಿಂದ ಇನ್ನಷ್ಟು ಅಂಕಗಳ ನಿರೀಕ್ಷೆಯಲ್ಲಿರುವುದಾಗಿ ವಿದ್ಯಾರ್ಥಿ ಮಲ್ಲಿಕಾರ್ಜುನ ಚಟ್ಟೇರ್ ತಿಳಿಸಿದರು.
ಇನ್ನೂ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು, ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಕೊರೊನಾ ಕಾರಣದಿಂದ ಪರೀಕ್ಷೆಯನ್ನು ಮುಂದೂಡಿದ್ದ ಅವಧಿಯನ್ನು ಸದ್ಬಳಕೆ ಮಾಡಿಕೊಂಡೆ. ಜೊತೆಗೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕೊರೊನಾ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅಲ್ಲದೇ ಲಾಕ್ ಡೌನ್ ಸಂದರ್ಭದಲ್ಲಿ ಕೈ ಮುರಿದುಕೊಂಡಿದ್ದೆ. ಆದರೂ ಧೃತಿಗೆಡದೆ ಒತ್ತಡ ರಹಿತವಾಗಿ ಓದಿದ್ದರಿಂದ ಸಾಧನೆ ಸಾಧ್ಯವಾಗಿದೆ. ಜೊತೆಗೆ ತಂದೆ, ತಾಯಿ ಶಿಕ್ಷಕರು ಪ್ರೋತ್ಸಾಹಿಸಿದರು ಎಂದು ವಿದ್ಯಾರ್ಥಿ ಮಲ್ಲಿಕಾರ್ಜುನ ಚಟ್ಟೇರ್ ಸಂತಸ ಹಂಚಿಕೊಂಡರು.
ಟೈಲರ್ ವೃತ್ತಿಯಲ್ಲಿ ಕೆಲಸ ನಿರ್ವಹಿಸಿದ ಕಷ್ಟಗಳು ಮಗನ ಈ ಸಾಧನೆ ಮುಂದೆ ಇನ್ನಿಲ್ಲವಾದವು. ಅವನು ಇಷ್ಟಪಟ್ಟಂತೆ ಓದಲಿ ಎನ್ನುವುದು ತಮ್ಮ ಮನದಾಸೆ ಎಂದು ಉಮೇಶ ಚಟ್ಟೇರ್ ಹೇಳಿಕೊಂಡರು. ಪುತ್ರ ಆಟೋಟ ಸೇರಿದಂತೆ ಶಾಲೆಯ ಇತರೆ ಚಟುವಟಿಕೆಯಲ್ಲಿಯೂ ಸದಾ ಮುಂದೆ. ಸದ್ಯ ಈ ಸಾಧನೆ ತೃಪ್ತಿ ತಂದಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಭಾರತಿ ಚಟ್ಟೇರ್ ಹರ್ಷ ವ್ಯಕ್ತಪಡಿಸಿದ್ದಾರೆ.