ಕೊಪ್ಪಳ: ಉತ್ತರ ಕರ್ನಾಟಕ ಭಾಗದಲ್ಲಿ ಹೆಂಗಳೆಯರ ಹಬ್ಬವೆಂದು ಪ್ರಸಿದ್ಧಿ ಹೊಂದಿರುವ ನಾಗರಪಂಚಮಿ ಹಬ್ಬ ಶುರುವಾಗಿದೆ.
ಪಂಚಮಿಯ ದಿನವಾದ ಇಂದು ಜಿಲ್ಲೆಯಲ್ಲಿಯೂ ನಾಗರಕಟ್ಟೆಗಳಿಗೆ ತೆರಳಿ ಜನರು ನಾಗಮೂರ್ತಿಗಳಿಗೆ ಹಾಲೆರೆಯುತ್ತಿದ್ದಾರೆ. ಕೊಪ್ಪಳ ನಗರ ಸೇರಿದಂತೆ ಜಿಲ್ಲಾದ್ಯಂತ ಇಂದು ಜನರು ನಾಗರಕಟ್ಟೆಗಳಿಗೆ ತೆರಳಿ ನಾಗಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಅತ್ಯಂತ ಸಂಭ್ರಮದಿಂದ ನಾಗರಪಂಚಮಿಯನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿ ಹಬ್ಬದ ಸಂಭ್ರಮವನ್ನು ಕಳೆಗುಂದಿಸಿದೆ. ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಜನರು ನಾಗರಕಟ್ಟೆಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.
ಕೆಲವರು ಮಾಸ್ಕ್ ಹಾಕಿಕೊಂಡು ಬಂದಿರುವ ದೃಶ್ಯ ಕಂಡು ಬರುತ್ತಿದೆ. ಬಗೆ ಬಗೆಯ ಸಿಹಿ ಉಂಡಿಗಳನ್ನು ತಯಾರಿಸಿ ಹಬ್ಬ ಆಚರಿಸೋದು ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬದ ವಿಶೇಷತೆಯಾಗಿದೆ.