ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಹಿನ್ನೆಲೆ ಪಟ್ಟಣದಲ್ಲಿದ್ದವರು ಮರಳಿ ತಮ್ಮ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡರು. ಅನೇಕರು ಹೊಸ ಹೊಸ ಪ್ರಯತ್ನಕ್ಕೆ ಕೈಹಾಕಿದರು. ಅದರಂತೆ ಮಾಜಿ ಸಚಿವ ಶಿವರಾಜ ತಂಗಡಗಿ ತಮ್ಮ ರಾಜಕಾರಣದ ನಡುವೆ ಕೃಷಿ, ಮೀನು ಸಾಕಾಣಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗುತ್ತಿದ್ದಾರೆ.
ಹೌದು, ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ರಾಜಕೀಯದ ನಡುವೆ ಅಪ್ಪಟ ಕೃಷಿಕರಾಗಿ ಬದಲಾಗಿದ್ದಾರೆ. ಕಾರಟಗಿ ಬಳಿ ಇರುವ ತಮ್ಮ 54 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿತ್ಯ ತಮ್ಮ ಜಮೀನಿನಲ್ಲಿ ಶ್ರಮವಹಿಸಿ 4 ಎಕರೆ ಪ್ರದೇಶದಲ್ಲಿ ಮೀನು ಸಾಕಾಣಿಕೆ, 4 ಎಕರೆಯಲ್ಲಿ 2 ಹೊಂಗಲ ಹಾಗು 25 ಗಿರ್ ತಳಿಯ ಹಸು ಸಾಕಾಣಿಕೆ, 500 ಕುರಿಗಳನ್ನು ಸಾಕಿದ್ದಾರೆ.
ಮೀನು ಕೃಷಿಯಿಂದ ಬಂತು ಆದಾಯ..
ಇದರ ಜೊತೆಗೆ ಒಂದಿಷ್ಟು ನಾಟಿ ಕೋಳಿಗಳನ್ನು ಸಹ ಸಾಕಿದ್ದಾರೆ. ಅಲ್ಲದೆ ಮುರ್ರಾ ತಳಿಯ ಎಮ್ಮೆಗಳನ್ನು ಸಹ ತಂದು ಸಾಕಲು ಮುಂದಾಗಿದ್ದಾರೆ. ಇದರ ಜೊತೆಗೆ 30 ಎಕರೆ ಪ್ರದೇಶದಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದಾರೆ. ಶ್ರೀಗಂಧ, ಮಹಾಗನಿ, ನೇರಳೆ, ಸೀತಾಫಲ, ಮಾವು, ನಿಂಬೆ, ಕರಿಬೇವು, ಬೇವು, ಹೆಬ್ಬೇವು ಸೇರಿದಂತೆ ವಿವಿಧ ಸಸಿಗಳನ್ನು ನೆಟ್ಟಿದ್ದಾರೆ.
4 ಎಕರೆ ಪ್ರದೇಶದಲ್ಲಿ ಕೆರೆ ಅಥವಾ ಹೊಂಡ ನಿರ್ಮಿಸಿ ಲಕ್ಷಾಂತರ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಈ ಮೀನುಗಳನ್ನು ಬೆಂಗಳೂರು, ಮುಂಬೈ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ತಮ್ಮ ಭೂಮಿಯಲ್ಲಿ ಸಮಗ್ರ ಕೃಷಿ ಮಾಡಲು ಪಿಎಲ್ಡಿ ಬ್ಯಾಂಕ್ನಿಂದ ಸುಮಾರು 1.5 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.
ಈಗ ಮೀನುಗಳಿಂದ ಮಾತ್ರ ಆದಾಯ ಬರುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಬೆಳೆಗಳು ಸಹ ಆದಾಯ ತಂದುಕೊಡಲಿವೆ ಎಂದು ಮಾಜಿ ಸಚಿವರು ಸಂತಸ ಹಂಚಿಕೊಂಡಿದ್ದಾರೆ.