ಕೊಪ್ಪಳ: ಶಾಸಕ ಉಮೇಶ್ ಕತ್ತಿ ಅವರ ಮನೆಯಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಸಿಎಂ ಯಡಿಯೂರಪ್ಪ ವಿರುದ್ಧದ ಸಭೆ ಎಂದು ಹೇಳುವುದಕ್ಕೆ ಆಗೋದಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರವಾಗಿ ಕೆಲ ಶಾಸಕರು ಉಮೇಶ್ ಕತ್ತಿ ಅವರ ಮನೆಯಲ್ಲಿ ಸಭೆ ಸೇರಿ ಚರ್ಚಿಸಿರಬಹುದು. ಅವರ ಮನೆಗೆ ಊಟಕ್ಕೆ ಹೋಗಿದ್ದೆವು ಎಂದು ಕೆಲ ಶಾಸಕರು ಹೇಳಿದ್ದಾರೆ. ಇದರಿಂದ ಸಿಎಂ ಯಡಿಯೂರಪ್ಪ ಅವರ ಸ್ಥಾನಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಪಕ್ಷದ ಹೈಕಮಾಂಡ್ ಇದೆ, ಅದನ್ನು ನೋಡಿಕೊಳ್ಳುತ್ತದೆ ಎಂದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿವೆ. ಆರಂಭದಲ್ಲಿಯೇ ನೆರೆ ಹಾವಳಿ ಉಂಟಾಯಿತು. ಅದಾದ ಬಳಿಕ ಉಪ ಚುನಾವಣೆ ಎದುರಾಯಿತು. ನಂತರ ಕೊರೊನಾ ಸಂಕಷ್ಟ ಎದುರಾಗಿದೆ. ಇದರಿಂದ ರಾಜ್ಯದ ಆರ್ಥಿಕತೆ ಅಷ್ಟೆ ಅಲ್ಲದೆ ಇಡೀ ಪ್ರಪಂಚದ ಆರ್ಥಿಕತೆ ಕುಸಿತ ಕಂಡಿದೆ. ಹೀಗಾಗಿ ಅಭಿವೃದ್ಧಿಗೆ ಕೊಂಚ ಹಿನ್ನಡೆಯಾಗಿದೆ ಎಂದರು.
ಚುನಾವಣೆಯಲ್ಲಿ ಜನರಿಗೆ ಮಾತು ಕೊಟ್ಟಿರುತ್ತೇವೆ. ಅವರಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವ ಸಲುವಾಗಿ ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿ ಶಾಸಕರು ಸಭೆ ಸೇರಿಬಹುದು. ಅವರು ಸಭೆ ಸೇರಿದ್ದು ತಪ್ಪು ಅಂತಲ್ಲ. ಆದರೆ ಅದು ಸಿಎಂ ವಿರುದ್ಧದ ಸಭೆ ಅಂತ ಹೇಳಲಿಕ್ಕೆ ಆಗೋದಿಲ್ಲ. ಕಾಂಗ್ರೆಸ್ನಲ್ಲಿಯೂ ಸಹ ನಾಯಕತ್ವದ ಗುಂಪುಗಾರಿಕೆ ಇದೆ. ಬಿಎಸ್ವೈ ಅವರ ಸಿಎಂ ಖುರ್ಚಿಗೆ ಯಾವುದೇ ಚ್ಯುತಿ ಇಲ್ಲ. ಅಭಿವೃದ್ಧಿ ವಿಷಯ ಚರ್ಚಿಸಲು ಸಭೆ ಸೇರಿದ್ದೇವೆ ಎಂದು ರಾಜುಗೌಡ ಸೇರಿದಂತೆ ಹಲವರು ಈಗಾಗಲೇ ಹೇಳಿದ್ದಾರೆ ಎಂದರು.
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಸಂಗಣ್ಣ ಕರಡಿ, 17 ಜನ ಕಾಂಗ್ರೆಸ್ ಶಾಸಕರ ತ್ಯಾಗದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಈ 17 ಜನರ ಆದ್ಯತೆ, ಆಸೆ, ಆಕಾಂಕ್ಷೆಗಳನ್ನು ಮೊದಲು ಪೂರ್ಣ ಮಾಡಬೇಕಿದೆ. ಅವರನ್ನು ವಂಚಿಸಿ ಅಧಿಕಾರ ಮಾಡಲು ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಸಮಾಜ ಒತ್ತಡ ಮಾಡುವುದು ಸರಿಯಲ್ಲ. ಆದರೆ ಯಾವ ಸಮಾಜಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಗುರುತಿಸುವ ಕೆಲಸವನ್ನು ಸಿಎಂ ಮಾಡುತ್ತಾರೆ. ಬಿಜೆಪಿ ಶಾಸಕರ ಬಂಡಾಯದ ಪ್ರಶ್ನೆಯೇ ಬರುವುದಿಲ್ಲ. ಪ್ರಸ್ತುತವಿರುವ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ, ರೈತರ ಕುರಿತು ಚಿಂತನೆ ಮಾಡಬೇಕಿದೆ. ನಮ್ಮ ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಸಹ ಆ ಸಭೆಯಲ್ಲಿ ಹೋಗಿರಬಹುದು. ಆದರೆ ಅದು ಸಿಎಂ ವಿರುದ್ಧದ ಸಭೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಸಂಗಣ್ಣ ಕರಡಿ ಅಭಿಪ್ರಾಯ ವ್ಯಕ್ತಪಡಿಸಿದರು.