ಗಂಗಾವತಿ: ತಾಲೂಕಿನ ಸಣಾಪುರ ಬಳಿ ಇರುವ ಕಿರು ಜಲಾಶಯ ಇದೀಗ ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ವಿದೇಶಿ ಪ್ರವಾಸಿಗರು ಸೇರಿದಂತೆ ಸ್ಥಳೀಯ ಪ್ರವಾಸಿಗರನ್ನು ಈ ಜಲಾಶಯ ಕಣ್ಮನ ಸೆಳೆಯುತ್ತಿದೆ.
ಜಲಾಶಯದಲ್ಲಿನ ನೀರು, ದೋಣಿ ವಿಹಾರಕ್ಕೆ ಪ್ರೇರೇಪಿಸುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದ್ರೆ ಈ ಜಲಾಶಯದಲ್ಲಿ ದೋಣಿ ವಿಹಾರಕ್ಕೆ ಕಾನೂನುಬದ್ಧವಾಗಿ ಅವಕಾಶವಿಲ್ಲ. ಆದರೂ ಪ್ರವಾಸಿಗರನ್ನು ಕೆಲ ವ್ಯಕ್ತಿಗಳು ನಾಡ ದೋಣಿಗಳಲ್ಲಿ ಜಲಾಶಯದೊಳಕ್ಕೆ ಕರೆದೊಯ್ದು ದೋಣಿ ವಿಹಾರ ನಡೆಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಮುಖ್ಯವಾಗಿ ವಿದೇಶಿ ಪ್ರವಾಸಿಗರು ದೋಣಿ ವಿಹಾರದ ಪ್ರಮುಖ ಗ್ರಾಹಕರಾಗಿದ್ದು, ಯಾವುದೇ ಲೈಫ್ ಜಾಕೆಟ್ ಬಳಸದೇ ನೀರಿನಲ್ಲಿ ದೋಣಿ ವಿಹಾರ ನಡೆಸಲಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿನ ಹೆಚ್ಚಿನ ನೀರು ಹೊರಕ್ಕೆ ಹರಿಸಿದ್ದಿಂದ ಈ ಸಣಾಪುರ ಕಿರು ಜಲಾಶಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ಈಗಾಗಲೆ ಇದೇ ಜಲಾಶಯದಲ್ಲಿನ ನೀರಿನ ಸೆಳೆತಕ್ಕೆ ಕೆಳೆದ ಮೂರು ವರ್ಷಗಳಲ್ಲಿ ಇಬ್ಬರು ವಿದೇಶಿಗರು, ನಾಲ್ಕು ಜನ ಸ್ಥಳೀಯರು ಮೃತಪಟ್ಟಿದ್ದಾರೆ. ಆದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.