ಗಂಗಾವತಿ(ಕೊಪ್ಪಳ): ಭತ್ತದ ನಾಡು ಗಂಗಾವತಿ ಈ ಬಾರಿ ರಾಜ್ಯ ರಾಜಕೀಯದಲ್ಲಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಬೀಡುಬಿಟ್ಟಿರುವುದು. ಇಂದು ಬೆಂಗಳೂರಿನಲ್ಲಿ ಹೊಸ ಪಕ್ಷವನ್ನು ಸಹ ಅವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಗರಿಗೆದರಿವೆ.
ಹೌದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ತಮ್ಮ ನೂತನ ಪಾರ್ಟಿಗೆ ಹೆಸರನ್ನು ಘೋಷಿಸುವ ಮೂಲಕ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಗೆ ರೆಡ್ಡಿ ಸಜ್ಜಾಗಿದ್ದಾರೆ. ಇತ್ತ ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮೊದಲ ಪ್ರತಿಕ್ರಿಯೆಯನ್ನು 'ಈಟಿವಿ ಭಾರತ'ಕ್ಕೆ ನೀಡಿದ್ದು, ರೆಡ್ಡಿ ಹೊಸ ಪಕ್ಷ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏನು ಪ್ರತಿತಂತ್ರ ಹೂಡಬೇಕು ಎಂಬುವುದರ ಬಗ್ಗೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಯೋಜನೆ ರೂಪಿಸಲಿದ್ದಾರೆ.
ಅಲ್ಲದೇ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ರೆಡ್ಡಿ ಹೇಳಿದ್ದಾರೆ. ಇದು ಮುಂದಿನ 2023ರ ಚುನಾವಣೆಗೆ ಅಂಥ ಯಾವುದೇ ಪರಿಣಾಮ ಬೀರುವುದಿಲ್ಲ.
ನಾನಂತೂ ಬಿಜೆಪಿ ಪಕ್ಷದ ಟಿಕೆಟ್ ಅಕಾಂಕ್ಷಿಯಾಗಿದ್ದು, ಎರಡು ಬಾರಿ ಕ್ಷೇತ್ರದಿಂದ ಗೆದ್ದಿರುವೆ. ಜನರ ವಿಶ್ವಾಸ ಗಳಿಸಿಕೊಂಡಿರುವೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಅವಕಾಶ ನೀಡಲಿದ್ದು, ಜನ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ.. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿ 12 ವರ್ಷ ವನವಾಸ ಅನುಭವಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ವಂತ ಪಕ್ಷ ಘೋಷಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದಾರೆ. ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪಕ್ಷ 'ಕಲ್ಯಾಣ ರಾಜ್ಯ ಪ್ರಗತಿ' ಅಭ್ಯರ್ಥಿಯಾಗಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಗಂಗಾವತಿಯಿಂದ ಸ್ಪರ್ಧೆ.. ಮುಂದಿನ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಂಗಾವತಿಯಿಂದ ನಾನು ಸ್ಪರ್ಧೆ ಮಾಡಲಿದ್ದೇನೆ. ಈಗಾಗಲೇ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ. ಗಂಗಾವತಿಯಿಂದ ಸ್ಪರ್ಧೆ ಖಚಿತ ಎನ್ನುವ ಕುತೂಹಲಕ್ಕೆ ಜನಾರ್ದನ್ ರೆಡ್ಡಿ ತೆರೆ ಎಳೆದರು.
ನಾನು ಹೊಂದಾಣಿಕೆ ರಾಜಕಾರಣಿಯಲ್ಲ. ಹಾಗಾಗಿ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಜನರ ಆಶೀರ್ವಾದದೊಂದಿಗೆ ಮುಂದೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಯಾರ ಮಾತು ಕೇಳಿಯೂ ನಾನು ಪಕ್ಷ ಕಟ್ಟುತ್ತಿಲ್ಲ. ಈಗಾಗಲೇ ನಮ್ಮ ಪಕ್ಷದ ಹೆಸರು ನೋಂದಾಯಿಸಲಾಗಿದೆ. ಇನ್ನು, 10-15 ದಿನದಲ್ಲೇ ಮತ್ತೊಂದು ಮಾಧ್ಯಮಗೋಷ್ಟಿ ನಡೆಸಿ ನಮ್ಮ ಹೊಸ ಪಕ್ಷದ ಚಿಹ್ನೆ, ಧ್ವಜ, ಕಾರ್ಯಾಲಯ, ಪ್ರಣಾಳಿಕೆ ಜೊತೆಗೆ ಬಹುತೇಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು.
ಗಂಗಾವತಿ ಈ ಬಾರಿ ಕುತೂಹಲ.. ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಪರಣ್ಣ ಮುನವಳ್ಳಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು,ಅವರಿಗೆ ಟಿಕೆಟ್ ಸಿಗುವ ಸಂಭವ ಇದೆ.ಆದರೆ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರಕ್ಕೆ ಧುಮುಕುವದರಿಂದ ಬಿಜೆಪಿ ಮತಗಳೂ ಚದುರಲಿದ್ದು,ಇಬ್ಬರ ಜಗಳ ಬೇರೆಯವರಿಗೂ ಲಾಭವೂ ಆಗಬಹುದೂ ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಜನಾರ್ದನ ರೆಡ್ಡಿ ಅವರಲ್ಲಿ ಹಣದ ತೋಳ್ಬಲ ಇದ್ದು, ಸಾಮಾಜಿಕ ಸೇವಾ ಕಳಕಳಿ ಇದ್ದು, ಅವರಿಗೆ ಗೆಲುವಿಗೆ ಸುಲಭವಾಗಬಹುದು.ಆದರೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮೇಲೆ ಬಿಜೆಪಿ ಹಾಗೂ ರೆಡ್ಡಿ ಗೆಲವು ನಿಂತಿದೆ. ಏನಾದರೂ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನಾದರೂ ನಿಲ್ಲಿಸಿದ್ದಾರೆ,ರೆಡ್ಡಿ ಗೆಲುವಿಗೂ ಕಷ್ಟವಾಗಬಹದೂ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ.. ರಾಜಕಾರಣಕ್ಕೆ ಗಣಿಧಣಿ ರೀ ಎಂಟ್ರಿ: ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಜನಾರ್ದನ ರೆಡ್ಡಿ ಘೋಷಣೆ