ಕುಷ್ಟಗಿ (ಕೊಪ್ಪಳ): ದಸರಾ, ದೀಪಾವಳಿ ಹಬ್ಬದ ಬಹು ಬೇಡಿಕೆಯ ಚೆಂಡು ಹೂವು ಕಟಾವಿನ ಹಂತಕ್ಕೆ ಬಂದು ತಲುಪಿದೆ. ಆದ್ರೆ ಈ ಬಾರಿ ಮಳೆ ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ ಪ್ರತಿ ಕೆ.ಜಿ ಗೆ 50 ರಿಂದ 60 ರೂ. ಇದ್ದ ಬೆಲೆ ಸದ್ಯದ ಮಾರುಕಟ್ಟೆಯಲ್ಲಿ 20 ರಿಂದ 30 ರೂಗೆ ಇಳಿಮುಖವಾಗಿದೆ.
ಈ ಸಲ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಬಹುತೇಕ ರೈತರು ಚೆಂಡು ಹೂವನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ. ಕುಷ್ಟಗಿಯ ಬೆಳೆಗಾರ ಚಿರಂಜೀವಿ ಹಿರೇಮಠ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ವಾರ್ಷಿಕ ಬೆಳೆಯಾಗಿ 600 ಮಹಾಗನಿ, 550 ಮಾವು, ಸೀಸನ್ ಇಳುವರಿಯಾಗಿ 2,200 ದಾಳಿಂಬೆ, 2,800 ಪಪ್ಪಾಯ, 10 ಸೀತಾಫಲ, 50 ನಿಂಬೆ ಬೆಳೆಸಿದ್ದಾರೆ. ಪಪ್ಪಾಯ ಬೆಳೆಗೆ ಕೀಟಬಾಧೆ ನಿಯಂತ್ರಿಸಲು ಈ ಬೆಳೆಗಳ ಮಧ್ಯೆ 12,000 ಚೆಂಡು ಹೂ ಸಸಿಗಳನ್ನು ಕಳೆದ ಎರಡೂವರೆ ತಿಂಗಳ ಹಿಂದೆ ನಾಟಿ ಮಾಡಿದ್ದಾರೆ. ದಸರಾ ಹಬ್ಬದ ಕಾರಣ ಗುರುವಾರದಿಂದ ಹೂಗಳನ್ನು ಕಟಾವು ಮಾಡಲಾಗಿದೆ. ಗದಗ ಹೂ ಮಾರಾಟಗಾರರು ಪ್ರತಿ ಕೆ.ಜಿ. ಹೂವಿಗೆ 30 ರೂಗಳಂತೆ ನೀಡಿ ಖರೀದಿಸಿದ್ದಾರೆ.
ಈ ಇಳುವರಿ ದೀಪಾವಳಿ ಹಬ್ಬದವರೆಗೂ ಬರಲಿದ್ದು, ಬೇಡಿಕೆ ಆಧರಿಸಿ ಹೂ ಕಟಾವು ನಡೆಯುತ್ತಿದೆ. ಆಗಾಗ ಸುರಿಯುವ ಮಳೆಯಿಂದ ನೀರಿನ ಭಾರಕ್ಕೆ ಹೂ ನೆಲಕ್ಕೆ ಬಿದ್ದು ಹಾಳಾಗುತ್ತಿದೆ. ಹೀಗಾಗಿ, ನಿರೀಕ್ಷಿತ ಇಳುವರಿ ಕೈ ಸೇರುವ ಆತಂಕ ಎದುರಿಸುವಂತಾಗಿದೆ ಅಂತಾರೆ ಕುಷ್ಟಗಿ ಪುರಸಭೆ ಸದಸ್ಯರೂ ಆಗಿರುವ ಚಿರಂಜೀವಿ ಹಿರೇಮಠ.