ಕುಷ್ಟಗಿ (ಕೊಪ್ಪಳ): ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ತೆರವುಗೊಳಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರು ಸ್ಥಾಪನೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹಾಲುಮತ ಸಮಾಜದ ಯುವ ಘಟಕದಿಂದ ಪ್ರತಿಭಟಿಸಲಾಯಿತು.
ಕಟ್ಟಿ ದುರಗಮ್ಮ ದೇವಸ್ಥಾನದಿಂದ ಬೈಕ್ ರ್ಯಾಲಿ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಹಾಲುಮತ ಸಮಾಜದ ಯುವ ಘಟಕದ ಸದಸ್ಯರು, ಗ್ರೇಡ್-2 ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶಂಕರ ಕರಪಡಿ ಎಂಬುವವರು ಮಾತನಾಡಿ, ದೇಶ ಕಂಡ ಅಪ್ರತಿಮ ಹೋರಾಟಗಾರನಿಗೆ ಅವಮಾನವಾಗಿದೆ. ಈಗಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಅಧಿಕಾರವಿಲ್ಲದ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದರು. ಇದೀಗ ರಾಯಣ್ಣನ ಪ್ರತಿಮೆ ತೆರವುಗೊಳಿಸಿದರೂ ಯಾಕೆ ಮೌನ ವಹಿಸಿದ್ದಾರೆ ಎಂದಿದ್ದಾರೆ.
ಕಿತ್ತೂರ ರಾಣಿ ಚೆನ್ನಮ್ಮ ಎಂದು ಹೇಳಿಕೊಳ್ಳುವ ಲಕ್ಷ್ಮೀ ಹೆಬ್ಬಾಳ್ಕರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಉಮೇಶ್ ಕತ್ತಿ ಮೊದಲಾದ ಘಟಾನುಘಟಿ ರಾಜಕೀಯ ನಾಯಕರು ಎಲ್ಲಿದ್ದೀರಿ? ಎಂದು ಪ್ರಶ್ನಿಸಿದರು. ಕೂಡಲೇ ಪೊಲೀಸ್ ಠಾಣೆಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಯಥಾವತ್ತಾಗಿ ಪುನರ್ ಸ್ಥಾಪಿಸಬೇಕು. ಇಲ್ಲವಾದಲ್ಲಿ ಕುಷ್ಟಗಿಯಿಂದಲೇ ಪ್ರತಿಮೆ ನಿರ್ಮಿಸಿಕೊಂಡು ಹೋಗಿ ಪೀರನವಾಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಎಚ್ಚರಿಸಿದರು.