ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೊರೊನಾ ಸೋಂಕು ನಿಯಂತ್ರಣ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಕೊರೊನಾ ಸಂಕಷ್ಟ ಮುಗಿಯುವವರೆಗೂ ಮಾಸಿಕ 7,500 ರೂಪಾಯಿ ನೆರವು ನೀಡಬೇಕು.
ಉದ್ಯೋಗ ಕೇಳುವ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ದಿನ ಕೆಲಸ ನೀಡಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯಲ್ಲಿ ನೆನಗುದಿಗೆ ಬಿದ್ದಿರುವ ಆಶ್ರಯ ಮನೆಗಳನ್ನು ಅರ್ಹ ಬಡ ಜನರಿಗೆ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.